ADVERTISEMENT

ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿ: 17 ಸಹಪಾಠಿಗಳ ಅಮಾನತು; ತರಗತಿ ಬಹಿಷ್ಕಾರ

ಪಿಟಿಐ
Published 17 ಫೆಬ್ರುವರಿ 2025, 13:25 IST
Last Updated 17 ಫೆಬ್ರುವರಿ 2025, 13:25 IST
<div class="paragraphs"><p>ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ</p></div>

ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ

   

ಪಿಟಿಐ ಚಿತ್ರ

ನವದೆಹಲಿ: ಇಬ್ಬರು ಸಂಶೋಧನಾ ವಿದ್ಯಾರ್ಥಿಗಳ ವಿರುದ್ಧ ಕೈಗೊಂಡ ಶಿಸ್ತುಕ್ರಮದ ವಿರುದ್ಧ ಪ್ರತಿಭಟನೆ ನಡೆಸಿದ್ದ 17 ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ (ಜೆಎಂಐ) ವಿದ್ಯಾರ್ಥಿಗಳು, ಸೋಮವಾರ ತರಗತಿಯನ್ನು ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ADVERTISEMENT

2019ರಲ್ಲಿ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ನಡೆದಿದ್ದ ಹೋರಾಟದ ನೆನಪಿನಲ್ಲಿ ಪ್ರತಿ ವರ್ಷ ಸಭೆ ನಡೆಸಲಾಗಿತ್ತು. ಪ್ರತಿಭಟನಾಕಾರರ ವಿರುದ್ಧ ಶಿಸ್ತು ಕ್ರಮವನ್ನು ಹಿಂಪಡೆಯಲು, ವಿವಿ ಆವರಣದಲ್ಲಿ ಪ್ರತಿಭಟನೆ ನಡೆಸದಂತೆ ಹೇರಿರುವ ನಿರ್ಬಂಧವನ್ನು ತೆರವುಗೊಳಿಸುವಂತೆ ಹಾಗೂ ಪೋಸ್ಟರ್‌ ಹಾಗೂ ಬ್ಯಾನರ್‌ಗಳನ್ನು ಹಾಕಿದರೆ ವಿಧಿಸಲಾಗುವ ₹50 ಸಾವಿರ ದಂಡವನ್ನು ಹಿಂಪಡೆಯುವಂತೆಯೂ ವಿದ್ಯಾರ್ಥಿಗಳು ಆಗ್ರಹಿಸಿದ್ದರು. ಇವರ ವಿರುದ್ಧ ವಿಶ್ವವಿದ್ಯಾಲಯ ಕ್ರಮ ಕೈಗೊಂಡಿತ್ತು.

ವಿದ್ಯಾರ್ಥಿಗಳ ಹೋರಾಟಕ್ಕೆ ಸಿಪಿಐ–ಎಂಎಲ್‌ ಲಿಬರೇಷನ್‌ ಪಕ್ಷದವರಾದ ಬಿಹಾರ ಕಾರಾಕಟ್‌ ಕ್ಷೇತ್ರದ ಸಂಸದ ರಾಜಾ ರಾಮ್ ಸಿಂಗ್ ಬೆಂಬಲ ವ್ಯಕ್ತಪಡಿಸಿದ್ದಾರೆ. ‘ವಿದ್ಯಾರ್ಥಿಗಳ ವೈಯಕ್ತಿಕ ದಾಖಲೆಯನ್ನು ಅಕ್ರಮವಾಗಿ ಪ್ರಸಾರ ಮಾಡಿದ ವಿಶ್ವವಿದ್ಯಾಲಯದ ಮುಖ್ಯ ಶಿಸ್ತುಪಾಲನಾ ಅಧಿಕಾರಿಯನ್ನು ವಜಾಗೊಳಿಸಬೇಕು ಹಾಗೂ ವಿದ್ಯಾರ್ಥಿಗಳ ವಿರುದ್ಧದ ಪ್ರಕರಣವನ್ನು ಹಿಂಪಡೆಯಬೇಕು ಎಂದು ಕುಲಪತಿ ಮಜರ್ ಆಸಿಫ್ ಅವರನ್ನು ಆಗ್ರಹಿಸಿದ್ದಾರೆ.

ಎಡಪಕ್ಷಗಳ ಬೆಂಬಲಿತ ಅಖಿಲ ಭಾರತ ವಿದ್ಯಾರ್ಥಿ ಒಕ್ಕೂಟವು ತರಗತಿ ಬಹಿಷ್ಕರಿಸುವ ವಿದ್ಯಾರ್ಥಿಗಳ ನಿಲುವನ್ನು ಬೆಂಬಲಿಸಿತು. 

‘ಜಾಮಿಯಾ ಆಡಳಿತವು ವಿದ್ಯಾರ್ಥಿಗಳನ್ನು ಬಂಧಿಸಬಹುದು. ಆದರೆ ನಮ್ಮ ಪ್ರತಿಭಟನೆಯನ್ನು ಹತ್ತಿಕ್ಕಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯದ ದಮನಕಾರಿ ನೀತಿಗಳ ವಿರುದ್ಧ ವಿದ್ಯಾರ್ಥಿಗಳು ಒಗ್ಗೂಡಿದ್ದಾರೆ’ ಎಂದಿದ್ದಾರೆ.

ಸಮಾಜಶಾಸ್ತ್ರ, ಸಮಾಜ ವಿಜ್ಞಾನ, ಭೂಗೋಳಶಾಸ್ತ್ರ, ಹಿಂದಿ, ಸಾಮಾಜಿಕ ಕಾರ್ಯ, ಸ್ಪಾನಿಷ್‌, ಲ್ಯಾಟಿನ್ ಅಮೆರಿಕನ್ ಅಧ್ಯಯನ, ಫ್ರೆಂಚ್ ಮತ್ತು ಫ್ರಾಂಕೊಫೋನ್‌ ಅಧ್ಯಯನ, ಕೊರಿಯಾದ ಭಾಷೆ ಹಾಗೂ ಸಾಂಸ್ಕೃತಿಕ, ಮಾಧ್ಯಮ ಹಾಗೂ ಆಡಳಿತ ಕೇಂದ್ರದ ವಿದ್ಯಾರ್ಥಿಗಳು ಪ್ರತಿಭಟನೆ ಬೆಂಬಲಿಸಿದ್ದಾರೆ. ಈ ಪ್ರಕರಣ ಕುರಿತು ರಚಿಸಲಾಗಿರುವ ಶಿಸ್ತು ಸಮಿತಿಯ ಸಭೆ ಫೆ. 25ರಂದು ನಡೆಯಲಿದೆ. 

ಸಹಪಾಠಿಗಳ ವಿರುದ್ಧ ಕ್ರಮ ಹಿಂಪಡೆಯಲು ವಿದ್ಯಾರ್ಥಿಗಳು 48 ಗಂಟೆಗಳ ಕಾಲಾವಕಾಶ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.