ADVERTISEMENT

ಜಮ್ಮು: ಉಗ್ರರ ದಾಳಿಗೆ ಡ್ರೋನ್‌ ಬಳಕೆ

ವಿಮಾನ ನಿಲ್ದಾಣದ ವಾಯುಪಡೆ ಕೇಂದ್ರದಲ್ಲಿ ಸ್ಫೋಟ: ಇಬ್ಬರಿಗೆ ಗಾಯ

ಪಿಟಿಐ
Published 27 ಜೂನ್ 2021, 21:08 IST
Last Updated 27 ಜೂನ್ 2021, 21:08 IST
ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯುಪಡೆಯ ಕೇಂದ್ರಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ --–ಪಿಟಿಐ ಚಿತ್ರ
ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯುಪಡೆಯ ಕೇಂದ್ರಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ --–ಪಿಟಿಐ ಚಿತ್ರ   

ಜಮ್ಮು: ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನಕೇಂದ್ರಿತ ಉಗ್ರರು ಇದೇ ಮೊದಲ ಬಾರಿಗೆ ಡ್ರೋನ್‌ಗಳನ್ನು ಬಳಸಿದ್ದಾರೆ. ಜಮ್ಮು ವಿಮಾನ ನಿಲ್ದಾಣದಲ್ಲಿರುವ ಭಾರತೀಯ ವಾಯು ಪಡೆ ಕೇಂದ್ರವೊಂದರ ಮೇಲೆ ಭಾನುವಾರ ಬೆಳಿಗ್ಗಿನ ಜಾವ 1.40ರ ಹೊತ್ತಿಗೆ ಎರಡು ಬಾಂಬ್‌ ಎಸೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆರು ನಿಮಿಷಗಳ ಅಂತರದಲ್ಲಿ ಎರಡು ಬಾಂಬ್‌ ದಾಳಿಗಳು ನಡೆದಿವೆ. ಇಬ್ಬರು ಯೋಧರು ದಾಳಿಯಲ್ಲಿ ಗಾಯಗೊಂಡಿದ್ದಾರೆ. ವಿಮಾನ ನಿಲ್ದಾಣದ ಭಾರಿ ಭದ್ರತೆಯ ತಾಂತ್ರಿಕ ಪ್ರದೇಶದ ಒಂದಸ್ತಿನ ಕಟ್ಟಡದ ಚಾವಣಿಯನ್ನು ಸೀಳಿ ಮೊದಲ ಬಾಂಬ್‌ ಒಳಗೆ ಬಿದ್ದಿದೆ. ಎರಡನೆಯ ಬಾಂಬ್‌ ಬಯಲು ಪ್ರದೇಶದಲ್ಲಿ ಬಿದ್ದಿದೆ. ಈ ಎರಡೂ ಕಡಿಮೆ ತೀವ್ರತೆಯ ಸ್ಫೋಟಕಗಳು. ವಾಯು ನೆಲೆಯು ನಗರದ ಹೊರ ವಲಯದ ಸತ್ವಾರಿ ಎಂಬಲ್ಲಿದೆ.

ಭಾರತೀಯ ವಾಯುಪಡೆಯ ಕೇಂದ್ರದ ಮೇಲೆ ನಡೆದಿರುವುದು ಭಯೋತ್ಪಾದನಾ ದಾಳಿ ಎಂಬುದನ್ನು ಜ‌ಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಮುಖ್ಯಸ್ಥ ದಿಲ್ಬಾಗ್‌ ಸಿಂಗ್‌ ಖಚಿತಪಡಿಸಿದ್ಧಾರೆ. ದಾಳಿಯ ಹಿಂದಿನ ಹುನ್ನಾರವೇನು ಎಂಬುದನ್ನು ಬಯಲಿಗೆಳೆಯಲು ವಾಯುಪಡೆಯ ಅಧಿಕಾರಿಗಳಿಗೆ ‍ಪೊಲೀಸ್‌ ಮತ್ತು ಇತರ ತನಿಖಾ ಸಂಸ್ಥೆಗಳು ನೆರವು ನೀಡುತ್ತಿವೆ ಎಂದು ಅವರು ತಿಳಿಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ತಂಡವೂ ಸ್ಥಳಕ್ಕೆ ತಲುಪಿದೆ.

ಡ್ರೋನ್‌ಗಳು ಎಲ್ಲಿಂದ ಬಂದಿವೆ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಅದರ ಹಾರಾಟದ ಹಾದಿಯನ್ನು ಪತ್ತೆ ಮಾಡುವ ಪ್ರಯತ್ನಗಳು ಆರಂಭವಾಗಿವೆ.

14 ಕಿ.ಮೀ. ಮಾತ್ರ: ಎರಡು ಸ್ಫೋಟಕಗಳನ್ನು ಉದುರಿಸಿದ ಡ್ರೋನ್‌ಗಳು ಗಡಿಯಾಚೆಗೆ ಅಥವಾ ಬೇರೆ ಯಾವುದೋ ಸ್ಥಳಕ್ಕೆ ಕತ್ತಲಲ್ಲೇ ಹಿಂದಿರುಗಿವೆ ಎಂದು ಅಧಿಕಾರಿಗಳು ಹೇಳಿದ್ಧಾರೆ. ಜಮ್ಮು ವಿಮಾನ ನಿಲ್ದಾಣದಿಂದ ಅಂತರರಾಷ್ಟ್ರೀಯ ಗಡಿಗೆ ಇರುವ ವಾಯು ಮಾರ್ಗದ ದೂರ 14 ಕಿ.ಮೀ.ಮಾತ್ರ.

ತಪ್ಪಿದ ದೊಡ್ಡ ದುರಂತ?
ಲಷ್ಕರ್‌ ಎ ತಯಬಾ ಸಂಘಟನೆಗೆ ಸೇರಿದವನು ಎನ್ನಲಾದ ವ್ಯಕ್ತಿಯ ಬಂಧನದಿಂದ ದೊಡ್ಡ ದಾಳಿಯ ಅಪಾಯವೊಂದನ್ನು ತಪ್ಪಿಸಲಾಗಿದೆ. ಆ ವ್ಯಕ್ತಿಯಿಂದ ಆರು ಕಿಲೋ ಸ್ಫೋಟಕಗಳನ್ನು ವಶಪಡಿಸಿಕೊಳ್ಳಲಾಗಿದೆ.ಜನಸಂದಣಿಯ ಪ್ರದೇಶದಲ್ಲಿ ಸ್ಫೋಟಕ ಇರಿಸುವ ಹೊಣೆಯನ್ನು ಉಗ್ರಗಾಮಿ ಸಂಘಟನೆಯು ಈತನಿಗೆ ವಹಿಸಿತ್ತು ಎಂದು ಜಮ್ಮು–ಕಾಶ್ಮೀರ ಪೊಲೀಸ್‌ ಮಹಾ ನಿರ್ದೇಶಕರು ತಿಳಿಸಿದ್ದಾರೆ.

ಮಾತುಕತೆ ಬೆನ್ನಿಗೆ ಹುನ್ನಾರ?
ನವದೆಹಲಿ:
ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು–ಕಾಶ್ಮೀರದ ಪಕ್ಷಗಳ ಮುಖಂಡರ ಜತೆಗೆ ಮಾತುಕತೆ ನಡೆಸಿದ ಮೂರನೇ ದಿನಕ್ಕೆ ಈ ದಾಳಿ ನಡೆದಿದೆ.

ಭಾರತ–ಪಾಕಿಸ್ತಾನ ಗಡಿಯಲ್ಲಿ ಕದನ ವಿರಾಮ ಜಾರಿಯಲ್ಲಿದೆ. ಹಿಂಬಾಗಿಲ ಮಾತುಕತೆಯ ಕಾರಣದಿಂದಾಗಿ, ಕೆಲವು ತಿಂಗಳಲ್ಲಿ ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ.

ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಲಡಾಖ್‌ ಭೇಟಿಯಲ್ಲಿದ್ದಾರೆ. ಲಡಾಖ್‌ನ ಭಾಗವಾಗಿರುವ ಕಾರ್ಗಿಲ್‌ನ ನಾಯಕರ ಜತೆಗೆ ಕೇಂದ್ರ ಗೃಹ ಸಚಿವಾಲಯವು ಮಾತುಕತೆ ನಡೆಸುತ್ತಿದೆ. ಇಂತಹ ಸಂದರ್ಭದಲ್ಲಿಯೇ ದಾಳಿ ನಡೆದಿದೆ. ಈ ಎಲ್ಲ ವಿದ್ಯಮಾನಗಳ ಕಾರಣಕ್ಕೆ ದಾಳಿ ನಡೆದಿದೆ ಎಂದು ಅಧಿಕೃತವಾದ ಹೇಳಿಕೆ ಯಾವುದೂ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.