ADVERTISEMENT

ಪ್ರಜಾಪ್ರಭುತ್ವ ನಾಶ ಪಡಿಸಿದ ಕೇಂದ್ರ ಸರ್ಕಾರ: ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ

ಜಮ್ಮು ಮತ್ತು ಕಾಶ್ಮೀರ: ಚುನಾವಣಾ ಪ್ರಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2024, 15:31 IST
Last Updated 4 ಸೆಪ್ಟೆಂಬರ್ 2024, 15:31 IST
<div class="paragraphs"><p>ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ದೋರುವಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎನ್‌ಸಿ ಮುಖ್ಯಸ್ಥ ಫಾರುಕ್‌ ಅಬ್ದುಲ್ಲಾ ಅವರು ಬುಧವಾರ ಚುನಾವಣಾ ಪ್ರಚಾರ ನಡೆಸಿದರು. ಕಾಂಗ್ರೆಸ್ ಹಾಗೂ ಎನ್‌ಸಿಯ ಇತರ ನಾಯಕರೂ ಇದ್ದರು </p></div>

ಜಮ್ಮು ಮತ್ತು ಕಾಶ್ಮೀರದ ಅನಂತನಾಗ್‌ ಜಿಲ್ಲೆಯ ದೋರುವಿನಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಎನ್‌ಸಿ ಮುಖ್ಯಸ್ಥ ಫಾರುಕ್‌ ಅಬ್ದುಲ್ಲಾ ಅವರು ಬುಧವಾರ ಚುನಾವಣಾ ಪ್ರಚಾರ ನಡೆಸಿದರು. ಕಾಂಗ್ರೆಸ್ ಹಾಗೂ ಎನ್‌ಸಿಯ ಇತರ ನಾಯಕರೂ ಇದ್ದರು

   

–ಪಿಟಿಐ ಚಿತ್ರ

ದೋರು/ಜಮ್ಮು: ‘ಪ್ರಜಾಪ್ರಭುತ್ವ ಗಟ್ಟಿಗೊಳಿಸಲು, ಜನರಿಗೆ ಅಧಿಕಾರ ನೀಡಲು ರಾಜ್ಯಗಳ ವಿಂಗಡಣೆ ಮಾಡಲಾಗುತ್ತದೆ. ಕೇಂದ್ರಾಡಳಿತ ಪ್ರದೇಶವನ್ನು ರಾಜ್ಯವನ್ನಾಗಿಸಲಾಗುತ್ತದೆ. ಆದರೆ, ಸ್ವತಂತ್ರ ಭಾರತದಲ್ಲಿ ಮೊದಲ ಬಾರಿಗೆ ರಾಜ್ಯವೊಂದನ್ನು (ಜಮ್ಮು ಮತ್ತು ಕಾಶ್ಮೀರ)  ಕೇಂದ್ರಾಡಳಿತ ಪ್ರದೇಶವನ್ನಾಗಿಸಿ, ಜನರ ಅಧಿಕಾರ ಕಿತ್ತುಕೊಂಡು ಪ್ರಜಾಪ್ರಭುತ್ವ ಇಲ್ಲದಂತೆ ಮಾಡಲಾಗಿದೆ’ ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಹೇಳಿದರು.

ADVERTISEMENT

ಜಮ್ಮು ಮತ್ತು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಕಾಂಗ್ರೆಸ್‌ ನಾಯಕ ರಾಹುಲ್‌ ಅವರು ಬುಧವಾರ ಚುನಾವಣಾ ಪ್ರಚಾರವನ್ನು ಆರಂಭಿಸಿದರು. ಜಮ್ಮುವಿನ ರಾಮ್‌ಬನ ಹಾಗೂ ಕಾಶ್ಮೀರದ ಅನಂತನಾಗ್ ಜಿಲ್ಲೆಯ ದೋರುವಿನಲ್ಲಿ ಪ್ರಚಾರ ಸಭೆ ನಡೆಸಿದರು.

‘ಚುನಾವಣೆಗೆ ಮುನ್ನವೇ ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಬೇಕು ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿಲಾಗಿತ್ತು. ಆದರೆ, ಚುನಾವಣೆ ಮುಗಿದ ಬಳಿಕ ಚರ್ಚಿಸೋಣ ಎಂದು ಬಿಜೆಪಿ ಹೇಳಿತು. ಚುನಾವಣೆ ಬಳಿಕ ಇಲ್ಲಿ ಕಾಂಗ್ರೆಸ್‌–ಎನ್‌ಸಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ನಾವು ರಾಜ್ಯದ ಸ್ಥಾನಮಾನವನ್ನು ವಾಪಸು ನೀಡುತ್ತೇವೆ’ ಎಂದರು.

‘ಒಂದು ವೇಳೆ ಚುನಾವಣೆ ಬಳಿಕವೂ ಬಿಜೆಪಿಯು ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡಲಿಲ್ಲ ಎಂದಿಟ್ಟುಕೊಳ್ಳಿ. ಪ್ರಧಾನಿ ಮೋದಿ ಸರ್ಕಾರವು ಕೇಂದ್ರದಲ್ಲಿ ಹೆಚ್ಚು ದಿನ ಉಳಿಯುವುದಿಲ್ಲ. ‘ಇಂಡಿಯಾ’ ಮೈತ್ರಿಕೂಟವು ಸರ್ಕಾರ ರಚಿಸಲಿದೆ. ನಮ್ಮ ಸರ್ಕಾರದ ಮೊದಲ ಕೆಲಸವೇ ರಾಜ್ಯದ ಸ್ಥಾನಮಾನ ನೀಡುವುದಾಗಿದೆ’ ಎಂದರು.

ಮೈತ್ರಿ ಪಾಲಿಸಬೇಕು: ‘ಕಾಂಗ್ರೆಸ್‌–ಎನ್‌ಸಿ ನಡುವೆ ಬಿರುಕು ಮೂಡಿಸಲು ಹಲವರು ಹೊಂಚು ಹಾಕುತ್ತಿದ್ದಾರೆ. ಆದರೆ, ನಾವು ಒಟ್ಟಾಗಿಯೇ ಇರಬೇಕು. ಇಲ್ಲಿನ ಜನರಿಗೆ ಅನ್ಯಾಯವಾಗಿದೆ. ಇದರಲ್ಲಿ ಯಾರೂ ರಾಜಕೀಯ ಮಾಡಬಾರದು’ ಎಂದು ರಾಹುಲ್‌ ಗಾಂಧಿ ಕಾರ್ಯಕರ್ತರಿಗೆ ಕರೆ ನೀಡಿರು. ನ್ಯಾಷನಲ್‌ ಕಾನ್ಫರೆನ್ಸ್‌ ಮುಖ್ಯಸ್ಥ ಫಾರೂಕ್‌ ಅಬ್ದುಲ್ಲಾ ಅವರೂ ತಮ್ಮ ಕಾರ್ಯಕರ್ತರಿಗೆ ‘ಒಟ್ಟಾಗಿ ಕೆಲಸ ಮಾಡಿ’ ಎಂದರು.

ಜಮ್ಮು ಮತ್ತು ಕಾ‌ಶ್ಮೀರದ ಅಭಿವೃದ್ಧಿಗಾಗಿ ಇಂಥ ತುರ್ತಿನ ಸಂದರ್ಭದಲ್ಲಿ ಕಾಂಗ್ರೆಸ್‌–ಎನ್‌ಸಿ ಮೈತ್ರಿ ಮಾಡಿಕೊಳ್ಳುವುದು ಅಗತ್ಯವಿತ್ತು.
-ಫಾರೂಕ್‌ ಅಬ್ದುಲ್ಲಾ, ಎನ್‌ಸಿ ಮುಖ್ಯಸ್ಥ

‘ಲೆಫ್ಟಿನೆಂಟ್‌ ಗವರ್ನರ್‌ 21ನೇ ಶತಮಾನದ ರಾಜ’

‘1947ರಲ್ಲಿ ರಾಜರ ಕೈಯಲಿದ್ದ ಪ್ರದೇಶಗಳನ್ನು ಪಡೆದುಕೊಂಡು ನಾವು ಪ್ರಜಾಪ್ರಭುತ್ವ ಸ್ಥಾಪಿಸಿದೆವು. ಆದರೆ ಈಗ ಇಲ್ಲಿನ ಲೆಫ್ಟಿನೆಂಟ್ ಗವರ್ನರ್‌ ಅವರು 21ನೇ ಶತಮಾನದ ರಾಜನಂತೆ ವರ್ತಿಸುತ್ತಾರೆ. ತಮಗೆ ಏನು ಬೇಕೊ ಅದನ್ನು ಮಾಡುತ್ತಾರೆ. ಬಿಜೆಪಿ ಆರ್‌ಎಸ್‌ಎಸ್‌ನೊಂದಿಗೆ ನಂಟು ಹೊಂದಿರುವ ಹೊರಗಿನವರಿಗೆ ಮಾತ್ರವೇ ಕಾಮಗಾರಿಗಳ ಗುತ್ತಿಗೆ ನೀಡುತ್ತಾರೆ’ ಎಂದು ರಾಹುಲ್‌ ಗಾಂಧಿ ಲೇವಡಿ ಮಾಡಿದರು.

‘ರಾಜ್ಯ ಸ್ಥಾನಮಾನ ರದ್ದು: ಅದಾನಿ ಅಂಬಾನಿಗೆ ಸಹಾಯ’

‘ಸಣ್ಣ–ಮಧ್ಯಮ ಪ್ರಮಾಣದ ಉದ್ಯಮವನ್ನು ನಿಯಂತ್ರಿಸಲು ಜಿಎಸ್‌ಟಿ ತಂದರು. ನೋಟು ರದ್ದು ಮಾಡಿದರು. ಬಡವರಿಗೆ ಮಧ್ಯಮ ವರ್ಗದವರಿಗೆ ಬ್ಯಾಂಕ್‌ಗಳ ಬಾಗಿಲು ಮುಚ್ಚಿದರು. ಅಂಬಾನಿ ಅದಾನಿ ಅವರಿಗಾಗಿ ಇಡೀ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ಈ ಇಬ್ಬರು ಉದ್ಯಮಿಗಳಿಗೆ ಸಹಾಯ ಮಾಡುವುದಕ್ಕಾಗಿಯೇ ಬಹುಶಃ ಜಮ್ಮು ಮತ್ತು ಕಾಶ್ಮೀರಕ್ಕೆ 370ನೇ ವಿಧಿ ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ರದ್ದು ಮಾಡಲಾಗಿದೆ’ ಎಂದು ರಾಹುಲ್‌ ಗಾಂಧಿ ದೂರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.