ADVERTISEMENT

ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಗೆ ಯುದ್ಧ-ಬಂದೂಕು ಪರಿಹಾರವಲ್ಲ: ಮೆಹಬೂಬಾ ಮುಫ್ತಿ

ಪಿಟಿಐ
Published 21 ಫೆಬ್ರುವರಿ 2021, 12:42 IST
Last Updated 21 ಫೆಬ್ರುವರಿ 2021, 12:42 IST
ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ
ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ   

ಶ್ರೀನಗರ: ಯುದ್ಧ ಅಥವಾ ಬಂದೂಕು ಎರಡೂ ಪರಿಹಾರವಲ್ಲ,ಜಮ್ಮು ಮತ್ತು ಕಾಶ್ಮೀರದ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನದ ನಡುವಿನ ಮಾತುಕತೆಯ ಮೂಲಕವೇ ಬಗೆಹರಿಸಿಕೊಳ್ಳಬೇಕು ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಭಾನುವಾರ ಹೇಳಿದ್ದಾರೆ.

ಶುಕ್ರವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಅಧಿಕಾರಿಯ ಕುಟುಂಬಕ್ಕೆ ಸಾಂತ್ವನ ಹೇಳಲು ಕುಪ್ವಾರಾ ಜಿಲ್ಲೆಯ ಜಿರ್ಹಾಮಾ ಪ್ರದೇಶಕ್ಕೆ ಭೇಟಿ ನೀಡಿದ ನಂತರ ಅವರು, ಕೇಂದ್ರವು ಕೇಂದ್ರಾಡಳಿತ ಪ್ರದೇಶದ ಜನರನ್ನು ಕೂಡ ಮಾತುಕತೆ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಮೆಹಬೂಬಾ, ಜಮ್ಮು ಮತ್ತು ಕಾಶ್ಮೀರದಲ್ಲಿ ಹಲವಾರು ವರ್ಷಗಳಿಂದ ಪ್ರಾಣ ಕಳೆದುಕೊಂಡಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು ಮತ್ತು 'ಕೇಂದ್ರ ಸರ್ಕಾರವು ಇದರ ಬಗ್ಗೆ ತಲೆಕೆಡಿಸಿಕೊಳ್ಳದಿರುವುದು ಅತ್ಯಂತ ದುರದೃಷ್ಟಕರ' ಎಂದು ಹೇಳಿದರು.

ADVERTISEMENT

ಭಾರತವು ಚೀನಾದೊಂದಿಗೆ ಮಾತನಾಡಲು ಸಾಧ್ಯವಾದರೆ, ಪಾಕಿಸ್ತಾನದೊಂದಿಗೂ ಮಾತುಕತೆ ನಡೆಸಬೇಕು ಎಂದು ಅವರು ಹೇಳಿದರು.

ಚೀನಾ ನಮ್ಮ ಪ್ರದೇಶಕ್ಕೆ ಪ್ರವೇಶಿಸಿ ನಮ್ಮ 20ಕ್ಕೂ ಹೆಚ್ಚು ಸೈನಿಕರನ್ನು (ಸೇನಾ ಸಿಬ್ಬಂದಿ) ಕೊಂದಿತು. ಆದರೆ, ಅದರ ಹೊರತಾಗಿಯೂ ಅವರೊಂದಿಗೆ ಮಾತುಕತೆ ನಡೆಸಲಾಗುತ್ತಿರುವುದು ಒಳ್ಳೆಯದು. ಅವರೊಂದಿಗೆ ಸುಮಾರು ಹನ್ನೆರಡು ಬಾರಿ ಮಾತುಕತೆ ನಡೆಸಲಾಗಿದ್ದು, ಕೆಲವು ನಿರ್ಣಯಗಳನ್ನು ಕೈಗೊಳ್ಳಬಹುದು ಎಂದು ಹೇಳಿದರು.

ಜಮ್ಮು ಮತ್ತು ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವಿನ 'ಯುದ್ಧಭೂಮಿ'ಯಾಗಿ ಮಾರ್ಪಟ್ಟಿದೆ ಮತ್ತು ಪೊಲೀಸರು, ಸಾಮಾನ್ಯ ಜನರು ಮತ್ತು ಭದ್ರತಾ ಸಿಬ್ಬಂದಿ ಎರಡೂ ಕಡೆಗಳಲ್ಲೂ ಕೊಲ್ಲಲ್ಪಡುತ್ತಿದ್ದಾರೆ. ಯುದ್ಧವು ಯಾವುದೇ ಸಮಸ್ಯೆಗೆ ಪರಿಹಾರವಲ್ಲ.ಬಂದೂಕಿನ ಮೂಲಕ ಯಾವುದೇ ಸಮಸ್ಯೆಯನ್ನು ಬಗೆಹರಿಸಲಾಗುವುದಿಲ್ಲ. ಅದು ಉಗ್ರರು ಅಥವಾ ಭದ್ರತಾ ಪಡೆಗಳದ್ದಾಗಿರೂ ಅಷ್ಟೆ. ಆದ್ದರಿಂದ, ಜಗತ್ತಿನಾದ್ಯಂತ ಮಾತುಕತೆಯ ಮೂಲಕವೇ ಯಾವುದೇ ಸಮಸ್ಯೆಯನ್ನು ಬಗೆಹರಿಸಿದಂತೆ, ಪಾಕಿಸ್ತಾನದೊಂದಿಗೂ ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಮಾತುಕತೆ ನಡೆಸುವ ಅವಶ್ಯಕತೆಯಿದೆ ಎಂದು ನಾವು ಭಾವಿಸುತ್ತೇವೆ ಎಂದು ಪಿಡಿಪಿ ಮುಖ್ಯಸ್ಥರು ಹೇಳಿದರು.

ಪಾಕಿಸ್ತಾನದೊಂದಿಗಿನ ಮಾತುಕತೆ ಕುರಿತು ಕೇಂದ್ರದ ನಿಲುವಿನ ಬಗ್ಗೆ ಪ್ರಶ್ನಿಸಿದ್ದಕ್ಕೆ ಉತ್ತರಿಸಿದ ಅವರು, 'ಜಮ್ಮು ಮತ್ತು ಕಾಶ್ಮೀರದ ಜನರು ಹತ್ಯೆಯಾಗುತ್ತಿರುವ ಬಗ್ಗೆ ಕೇಂದ್ರವು ಚಿಂತಿಸುತ್ತಿಲ್ಲ' ಎಂದು ಹೇಳಿದರು.

ಈ ಬಗ್ಗೆ ಅವರು ಕಾಳಜಿ ವಹಿಸುವುದಿಲ್ಲ ಮತ್ತು ಸತ್ತರೆ ಸಾಯಲಿ ಎನ್ನುವ ಧೋರಣೆ ಅನುಸರಿಸುತ್ತಿದ್ದಾರೆ. ಯಾವಾಗೆಲ್ಲ ಜಮ್ಮು ಮತ್ತು ಕಾಶ್ಮೀರ ವಿಚಾರವಾಗಿ ಮಾತುಕತೆ ನಡೆದಿದೆಯೋ ಅಥವಾ 2003-04ರಲ್ಲಿ ಬಿಜೆಪಿ ನಾಯಕ ಎಲ್.ಕೆ. ಅಡ್ವಾಣಿ ಉಪ ಪ್ರಧಾನಿಯಾಗಿದ್ದಾಗ, ಮಾಜಿ ಪಾಕಿಸ್ತಾನ ಅಧ್ಯಕ್ಷ ಪರ್ವೇಜ್ ಮುಷರಫ್ ಅವರೊಂದಿಗೆ ಮಾತುಕತೆ ನಡೆಸಿದಾಗಲೆಲ್ಲ ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರವು ಗಮನಾರ್ಹವಾಗಿ ಕಡಿಮೆಯಾಗಿದೆ, ಭಯೋತ್ಪಾದನೆಯು ಕಡಿಮೆಯಾಗಿದೆ ಎಂದರು.

ಈಗ ಸಹ, ಅದೇ ನೀತಿಯನ್ನು ಹೊಂದುವ ಅವಶ್ಯಕತೆಯಿದೆ ಮತ್ತು ಮಾತುಕತೆಯಲ್ಲದೆ ಬೇರೆ ಆಯ್ಕೆಗಳಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಮಾಜಿ ಮುಖ್ಯಮಂತ್ರಿ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.