ADVERTISEMENT

ಉಗ್ರರಿಂದ ಪೊಲೀಸ್‌ ಸಬ್‌ಇನ್‌ಸ್ಪೆಕ್ಟರ್‌ ಹತ್ಯೆ, ರಾಜಕೀಯ ಪಕ್ಷಗಳಿಂದ ಖಂಡನೆ

ಪಿಟಿಐ
Published 12 ಸೆಪ್ಟೆಂಬರ್ 2021, 14:20 IST
Last Updated 12 ಸೆಪ್ಟೆಂಬರ್ 2021, 14:20 IST
ಉಗ್ರರಿಂದ ಹತ್ಯೆಗೊಳಗಾದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಅವರ ಮನೆಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ಉಗ್ರರಿಂದ ಹತ್ಯೆಗೊಳಗಾದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್ ಅವರ ಮನೆಗೆ ಭೇಟಿ ನೀಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ   

ಶ್ರೀನಗರ: ನಗರದ ಹೃದಯ ಭಾಗದಲ್ಲಿ ಉಗ್ರರು ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ ಒಬ್ಬರನ್ನು ಹತ್ಯೆ ಮಾಡಿರುವುದನ್ನು ಜಮ್ಮು ಮತ್ತು ಕಾಶ್ಮೀರದ ರಾಜಕೀಯ ಪಕ್ಷಗಳು ಭಾನುವಾರ ಖಂಡಿಸಿವೆ.

ಪ್ರೊಬೇಷನರಿ ಸಬ್‌ಇನ್‌ಸ್ಪೆಕ್ಟರ್‌ ಅರ್ಷಿದ್ ಅಹ್ಮದ್ ಅವರನ್ನು ಖನ್ಯಾರ್ ಪ್ರದೇಶದ ಮಾರುಕಟ್ಟೆಯಲ್ಲಿ ಅಪರಾಹ್ನ ಉಗ್ರರು ಗುಂಡಿಟ್ಟು ಹತ್ಯೆ ಮಾಡಿದ್ದರು.

'ಎಸ್‌ಐ ಅರ್ಷಿದ್ ಅಹ್ಮದ್ ಹತ್ಯೆಯನ್ನು ಬಲವಾಗಿ ಖಂಡಿಸುತ್ತೇವೆ. ಕರ್ತವ್ಯ ನಿರ್ವಹಣೆ ವೇಳೆ ಮೃತಪಟ್ಟ ನಿರ್ಭೀತ ಪೊಲೀಸರ ಕುಟುಂಬ ಸದಸ್ಯರಿಗೆ ನಮ್ಮ ಪ್ರಾಮಾಣಿಕ ಸಂತಾಪವನ್ನು ವ್ಯಕ್ತಪಡಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಕುಟುಂಬವು ಮುಂದಿನ ದಿನಗಳಲ್ಲಿ ನೋವನ್ನು ಎದುರಿಸುವ ಶಕ್ತಿಯನ್ನು ಕಂಡುಕೊಳ್ಳಲಿ' ಎಂದು ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ತನ್ನ ಟ್ವಿಟರ್ ಖಾತೆಯಲ್ಲಿ ಹೇಳಿದೆ.

ADVERTISEMENT

ಎನ್‌ಸಿ ಉಪಾಧ್ಯಕ್ಷ ಒಮರ್ ಅಬ್ದುಲ್ಲಾ ಕೂಡ ಉಗ್ರರ ದಾಳಿಯನ್ನು ಖಂಡಿಸಿದ್ದಾರೆ.

'ಶ್ರೀನಗರದ ಹೃದಯ ಭಾಗದಲ್ಲಿ ನಡೆದ ಭೀಕರ ದಾಳಿಯಲ್ಲಿ ಕರ್ತವ್ಯದಲ್ಲಿದ್ದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ ಅರ್ಷಿದ್ ಅಹ್ಮದ್ ಅವರ ಸಾವಿನ ಬಗ್ಗೆ ಕೇಳಲು ದುಃಖವಾಗುತ್ತಿದೆ. ಭರವಸೆಗಳಿಂದ ತುಂಬಿದ್ದ ಯುವ ಜೀವ ನಷ್ಟವಾಗಿದೆ, ಇನ್ನೊಂದೆಡೆ ಕುಟುಂಬ ದುಃಖದಲ್ಲಿ ಮುಳುಗಿದೆ. ಅಲ್ಲಾ ಜನಾತ್‌ನಲ್ಲಿ ಅರ್ಷಿದ್ ಅವರಿಗೆ ಸ್ಥಾನವನ್ನು ನೀಡಲಿ' ಎಂದು ಒಮರ್ ಟ್ವಿಟ್‌ನಲ್ಲಿ ಹೇಳಿದ್ದಾರೆ.

ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿ, 'ಇಂದು ಖನ್ಯಾರ್‌ನಲ್ಲಿ ಉಗ್ರರಿಂದ ಹತ್ಯೆಗೀಡಾದ ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಸಬ್‌ಇನ್‌ಸ್ಪೆಕ್ಟರ್‌ ಅರ್ಷಿದ್ ಅಹ್ಮದ್ ಸಾವಿನ ಸುದ್ದಿ ಕೇಳಿ ದುಃಖವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.

ಪೀಪಲ್ಸ್ ಕಾನ್ಫರೆನ್ಸ್ (ಪಿಸಿ) ಕೂಡ ಈ ಹತ್ಯೆಯನ್ನು ಖಂಡಿಸಿದೆ.

ಬಿಜೆಪಿ ವಕ್ತಾರ ಅಲ್ತಾಫ್ ಠಾಕೂರ್ ಕೂಡ ಹತ್ಯೆಯನ್ನು ಖಂಡಿಸಿದ್ದು, ಉಗ್ರರು 'ಹತಾಶೆ ಅನುಭವಿಸುತ್ತಿದ್ದಾರೆ'. ಹೀಗಾಗಿ ಈಗ ನಿರಾಯುಧ ಪೊಲೀಸರನ್ನು ಗುರಿಯಾಗಿಸಿಕೊಂಡಿದ್ದಾರೆ. ದಾಳಿ ನಡೆಸಿದವರನ್ನು ಕಂಡುಹಿಡಿಯಲು ಸಿಸಿಟಿವಿ ದೃಶ್ಯಾವಳಿಯ ಸಹಾಯ ಪಡೆಯಬೇಕು ಮತ್ತು ಅಪರಾಧಿಗಳನ್ನು ಶಿಕ್ಷಿಸಬೇಕು ಎಂದು ಠಾಕೂರ್ ಪೊಲೀಸರನ್ನು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.