ADVERTISEMENT

ಜಮ್ಮು–ಕಾಶ್ಮೀರದಲ್ಲಿ ಶೀತ ಮಾರುತ; ಲೆಹ್‌ನಲ್ಲಿ ಉಷ್ಣಾಂಶ –8 ಡಿಗ್ರಿ

ಏಜೆನ್ಸೀಸ್
Published 6 ಡಿಸೆಂಬರ್ 2018, 11:26 IST
Last Updated 6 ಡಿಸೆಂಬರ್ 2018, 11:26 IST
ಲೆಹ್‌ ಪ್ರದೇಶದ ವೈಮಾನಿಕ ಚಿತ್ರ– ಸಂಗ್ರಹ ಚಿತ್ರ
ಲೆಹ್‌ ಪ್ರದೇಶದ ವೈಮಾನಿಕ ಚಿತ್ರ– ಸಂಗ್ರಹ ಚಿತ್ರ   

ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ಶೀತ ಮಾರುತದ ಪ್ರಭಾವಕ್ಕೆ ಒಳಗಾಗಿದ್ದು, ಗುರುವಾರ ಲಡಾಕ್‌ ಪ್ರದೇಶ ರಾಜ್ಯದ ಅತ್ಯಂತ ಶೀತಲ ಪ್ರದೇಶವಾಗಿ ಗಮನ ಸೆಳೆದಿದೆ. ಲೆಹ್‌ನಲ್ಲಿ –8.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ದಾಖಲಾಗಿದೆ.

ನೀರು ಹೆಪ್ಪುಗಟ್ಟುವ ಉಷ್ಣಾಂಶಕ್ಕಿಂತಲೂ ಕಡಿಮೆ ಉಷ್ಣತೆಯಿಂದ ಕಾಶ್ಮೀರ ಕಣಿವೆ ಪ್ರದೇಶ ಜಡವಾಗಿದೆ. ಶ್ರೀನಗರದಲ್ಲಿ –2.6 ಡಿಗ್ರಿ ಸೆಲ್ಸಿಯಸ್‌, ಪಹಲ್‌ಗಾಮ್‌ನಲ್ಲಿ –4 ಡಿಗ್ರಿ ಸೆಲ್ಸಿಯಸ್‌ ಹಾಗೂ ಗುಲ್ಮರ್ಗ್‌ನಲ್ಲಿ –4.6 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿದ್ದು, ಇನ್ನೂ ಕೆಲ ಸಮಯದವರೆಗೂ ಶೀತ ಮಾರುತ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇಲ್ಲಿನ ಎತ್ತರ ಪ್ರದೇಶಗಳಲ್ಲಿ ಡಿಸೆಂಬರ್‌ 9–10ರಂದು ಸಾಧಾರಣ ಹಿಮ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ 24 ಗಂಟೆಗಳ ವರೆಗೂ ಮೋಡ ಮುಸುಕಿದ ವಾತಾವರಣವಿರಲಿದೆ ಹಾಗೂ ಶೀತದ ಪ್ರಮಾಣ ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿರುವುದಾಗಿ ಇಂಡಿಯಾ ಟುಡೇ ವರದಿ ಮಾಡಿದೆ.

ADVERTISEMENT

ಅನೇಕ ಭಾಗಗಳಲ್ಲಿ ವಿದ್ಯುತ್‌ ಸಂಪರ್ಕದಲ್ಲಿ ವ್ಯತ್ಯಯ ಉಂಟಾಗಿದೆ. ಇಲ್ಲಿನ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಗುರುವಾರದಿಂದಲೇ ಮುಚ್ಚಿವೆ. ಕಾಶ್ಮೀರದ ಶಾಲಾ ಶಿಕ್ಷಣ ನಿರ್ದೇಶನಾಲಯದ ಪ್ರಕಾರ, ಎಂಟನೇ ತರಗತಿ ವಿದ್ಯಾರ್ಥಿಗಳಿಗೆ ಡಿಸೆಂಬರ್‌ 6ರಿಂದ ಮಾರ್ಚ್‌ 2ರ ವರೆಗೂ ಚಳಿಗಾಲದ ರಜೆ ನೀಡಲಾಗಿದೆ ಹಾಗೂ ಹೈಸ್ಕೂಲ್‌ ವಿದ್ಯಾರ್ಥಿಗಳಿಗೆ ಡಿಸೆಂಬರ್‌ 17ರಿಂದ ಫೆಬ್ರುವರಿ 23ರ ವರೆಗೂ ರಜೆ ಇರಲಿದೆ.

ಬಟೊಟೆಯಲ್ಲಿ 2.7 ಡಿಗ್ರಿ ಸೆಲ್ಸಿಯಸ್‌, ಬನ್ನಿಹಾಲ್‌ನಲ್ಲಿ 0.2 ಡಿಗ್ರಿ ಸೆಲ್ಸಿಯಸ್‌ ಹಾಗೂ ಜಮ್ಮು ನಗರದಲ್ಲಿ 8.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶವಿದ್ದು, ಈಗಾಗಲೇ ಜನರು ಚಳಿಗಾಲದ ಶೀತದಿಂದ ರಕ್ಷಣೆಗಾಗಿ ಉಣ್ಣೆ ಬಟ್ಟೆಗಳನ್ನು ಸಿದ್ಧಪಡಿಸಿಕೊಳ್ಳುತ್ತಿದ್ದಾರೆ.‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.