
ಏಕನಾಥ ಶಿಂದೆ
ಮುಂಬೈ: ಜಮ್ಮು–ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡಿರುವ ಪುಣೆ ಮೂಲದ ಜಗದಾಳೆ ಕುಟುಂಬದ ನೆರವಿಗೆ ಧಾವಿಸಿದ್ದಾಗಿ ಮಹಾರಾಷ್ಟ್ರ ಸರ್ಕಾರ ಮಂಗಳವಾರ ಹೇಳಿದೆ.
‘ಜಗದಾಳೆ ಕುಟುಂಬಕ್ಕೆ ಎಲ್ಲ ನೆರವು ನೀಡುತ್ತೇವೆ’ ಎಂದು ಉಪಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಸುದ್ದಿಗಾರರಿಗೆ ತಿಳಿಸಿದರು.
ಉಗ್ರರ ದಾಳಿಯಿಂದಾಗಿ ಉದ್ಭವಿಸಿರುವ ಪರಿಸ್ಥಿತಿ ಅವಲೋಕಿಸುವುದಕ್ಕಾಗಿ ನಡೆದ ಸಭೆ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಕ್ರಿಯೆಗೆ ತಕ್ಕ ಪ್ರತಿಕ್ರಿಯೆ ಇರಲಿದೆ ಎಂದು ನಾನು ಭರವಸೆ ನೀಡುತ್ತೇನೆ. ಈ ದುಷ್ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಕ್ರಮ ತೆಗೆದುಕೊಳ್ಳುವರು’ ಎಂದು ಶಿಂದೆ ಹೇಳಿದ್ದಾರೆ.
ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್, ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಹ ಸಭೆಯಲ್ಲಿ ಪಾಲ್ಗೊಂಡಿದ್ದರು.
ಪುಣೆಯ ಅಸಾವರಿ ಜಗದಾಳೆ, ಪ್ರಗತಿ ಜಗದಾಳೆ, ಸಂತೋಷ್ ಜಗದಾಳೆ, ಕೌಸ್ತುಭ ಜಗದಾಳೆ ಹಾಗೂ ಸಂಗೀತಾ ಗಬೋಟೆ ಜಮ್ಮು–ಕಾಶ್ಮೀರಕ್ಕೆ ತೆರಳಿದ್ದು, ಈ ಪೈಕಿ ಸಂತೋಷ್ ಹಾಗೂ ಕೌಸ್ತುಭ ಅವರಿಗೆ ಗುಂಡು ತಗುಲಿ, ಗಾಯಗಳಾಗಿವೆ.
ಆಗ್ರಹ: ಉಗ್ರರ ದಾಳಿಯಿಂದ ಗಾಯಗೊಂಡಿರುವ ಇಬ್ಬರು ಸೇರಿದಂತೆ ಮಹಾರಾಷ್ಟ್ರದ ಕುಟುಂಬಕ್ಕೆ ನೆರವು ನೀಡುವಂತೆ ಜಮ್ಮು–ಕಾಶ್ಮೀರ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಅವರನ್ನು ಎನ್‌ಸಿಪಿ(ಶರದ್ ಪವಾರ್) ಕಾರ್ಯಾಧ್ಯಕ್ಷೆ ಹಾಗೂ ಸಂಸದೆ ಸುಪ್ರಿಯಾ ಸುಳೆ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.