ADVERTISEMENT

ಮುನ್ನೆಚ್ಚರಿಕೆ: ಕಾಶ್ಮೀರದಲ್ಲಿ ಕಳವಳ, ಸರ್ಕಾರದ ಕ್ರಮಗಳಿಂದ ಜನರಲ್ಲಿ ಗಾಬರಿ

ಪಿಟಿಐ
Published 3 ಆಗಸ್ಟ್ 2019, 19:31 IST
Last Updated 3 ಆಗಸ್ಟ್ 2019, 19:31 IST
ಜಮ್ಮುವಿನ ರೈಲು ನಿಲ್ದಾಣದ ಹೊರಗೆ ರಸ್ತೆಯಲ್ಲಿ ಶನಿವಾರ ಕಾದು ಕುಳಿತಿದ್ದ ಪ್ರವಾಸಿಗರು. ಚಿತ್ರ: ಪಿಟಿಐ
ಜಮ್ಮುವಿನ ರೈಲು ನಿಲ್ದಾಣದ ಹೊರಗೆ ರಸ್ತೆಯಲ್ಲಿ ಶನಿವಾರ ಕಾದು ಕುಳಿತಿದ್ದ ಪ್ರವಾಸಿಗರು. ಚಿತ್ರ: ಪಿಟಿಐ   

ಶ್ರೀನಗರ: ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಿರುವುದರಿಂದ ಮತ್ತು ರಾಜ್ಯದಿಂದ ಹೊರಡುವಂತೆ ಪ್ರವಾಸಿಗರಿಗೆ ಸೂಚನೆ ನೀಡಿರುವುದರಿಂದ ಕಾಶ್ಮೀರ ಕಣಿವೆಯ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಅಮರನಾಥ ಯಾತ್ರಿಕರು ಮತ್ತು ಮಾಛಿಲ್‌ ಮಾತಾ ಯಾತ್ರಿಕರು ಹಾಗೂ ಪ್ರವಾಸಿಗರು ರಾಜ್ಯದಿಂದ ಹೊರಡಲು ಮುಂದಾಗಿದ್ದಾರೆ. ಶ್ರೀನಗರದ ಬಸ್‌ ನಿಲ್ದಾಣ, ರೈಲು ನಿಲ್ದಾಣ ಮತ್ತು ವಿಮಾನ ನಿಲ್ದಾಣದಲ್ಲೂ ಜನದಟ್ಟಣೆ ಉಂಟಾಗಿದೆ.

ಎಲ್ಲಾ ಪ್ರವಾಸಿಗರೂ ಒಮ್ಮೆಲೇ ರಾಜ್ಯ ತೊರೆಯಲು ಮುಂದಾಗಿರುವುದರಿಂದ ಬಸ್‌, ರೈಲು ಮತ್ತು ವಿಮಾನಗಳ ಸೀಟುಗಳು ಭರ್ತಿಯಾಗಿವೆ. ಟಿಕೆಟ್ ದೊರೆಯದ ಸ್ಥಿತಿ ತಲೆದೋರಿದೆ. ಆದ್ದರಿಂದ ಪ್ರವಾಸಿಗರು ಮತ್ತು ಯಾತ್ರಿಕರು ನಿಲ್ದಾಣಗಳಲ್ಲೇ ಉಳಿದಿದ್ದಾರೆ.

ADVERTISEMENT

‘ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ‘35ಎ’ ವಿಧಿಯನ್ನು ರದ್ದುಪಡಿಸಲಾಗುತ್ತದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಭದ್ರತೆ ಹೆಚ್ಚಿಸಲಾಗಿದೆ’ ಎಂಬ ವದಂತಿ ರಾಜ್ಯದಲ್ಲಿ ಹರಡಿದೆ.

‘ಉಗ್ರರ ದಾಳಿಯನ್ನು ತಡೆಯಲಷ್ಟೇ ರಾಜ್ಯದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಯಾರೂ ಆತಂಕಗೊಳ್ಳಬೇಕಿಲ್ಲ’ ಎಂದು ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರು ಹೇಳಿದ್ದಾರೆ.

* ಸಂವಿಧಾನದ ‘35ಎ’ ವಿಧಿಯನ್ನು ರದ್ದುಪಡಿಸುವುದಿಲ್ಲ ಎಂದು ರಾಜ್ಯಪಾಲರು ಭರವಸೆ ನೀಡಿದ್ದಾರೆ. ಈ ಮಾತನ್ನು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಹೇಳಬೇಕು

-ಒಮರ್ ಅಬ್ದುಲ್ಲಾ, ಎನ್‌ಸಿ ಮುಖ್ಯಸ್ಥ

ಕಾಶ್ಮೀರದ ಬಂಕ್‌ವೊಂದರಲ್ಲಿ ಇಂಧನ ತುಂಬಿಸಿಕೊಳ್ಳಲು ಮುಗಿಬಿದ್ದ ಜನ.

ಭಾರತದಿಂದ ದಾಳಿ: ಪಾಕ್

‘ಭಾರತದ ಸೇನೆಯು ಆಜಾದ್‌ ಕಾಶ್ಮೀರದಲ್ಲಿ ಬಾಂಬ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಇಬ್ಬರು ನಾಗರಿಕರು ಸತ್ತಿದ್ದಾರೆ’ ಎಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಮೇಜರ್ ಜನರಲ್‌ಆಸಿಫ್ ಗಫೂರ್ ಟ್ವೀಟ್‌ ಮಾಡಿದ್ದಾರೆ.

ಈ ಆರೋಪವನ್ನು ಭಾರತೀಯ ಸೇನೆ ನಿರಾಕರಿಸಿದೆ. ‘ಪಾಕಿಸ್ತಾನದ ಸೇನೆ ಬೆಂಬಲಿತ ಉಗ್ರರು ನಡೆಸಿದ ದಾಳಿಗೆನಾವು ಪ್ರತಿದಾಳಿ ನಡೆಸಿದ್ದೇವಷ್ಟೆ’ ಎಂದು ಭಾರತೀಯ ಸೇನೆ ಹೇಳಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.