
ಶ್ರೀನಗರ: ಜಮ್ಮು–ಕಾಶ್ಮೀರದ ಪುಲ್ವಾಮಾ ಹಾಗೂ ಶ್ರೀನಗರ ಜಿಲ್ಲೆಗಳಲ್ಲಿನ ಆಸ್ಪತ್ರೆಗಳಿಗೆ ಪೊಲೀಸರು ಸೋಮವಾರ ದಿಢೀರ್ ಭೇಟಿ ನೀಡಿದ್ದಲ್ಲದೇ, ಆಸ್ಪತ್ರೆಗಳಲ್ಲಿನ ಲಾಕರ್‌ಗಳ ಪರಿಶೀಲನೆ ನಡೆಸಿದ್ದಾರೆ.
ನವೆಂಬರ್ 10ರಂದು ದೆಹಲಿಯ ಕೆಂಪುಕೋಟೆ ಬಳಿ ನಡೆದ ಸ್ಫೋಟ ಹಾಗೂ ‘ವೈಟ್ ಕಾಲರ್ ಭಯೋತ್ಪಾದಕ’ ಜಾಲಕ್ಕೆ ಸಂಬಂಧಿಸಿದ ಸ್ಫೋಟಕಗಳನ್ನು ವಶಪಡಿಸಿಕೊಂಡಿರುವ ಪ್ರಕರಣಗಳಿಂದಾಗಿ ಎಲ್ಲೆಡೆ ಭದ್ರತೆ, ಕಣ್ಗಾವಲು ಹೆಚ್ಚಿಸಿರುವಾಗಲೇ ಈ ಬೆಳವಣಿಗೆ ನಡೆದಿದೆ.
ಆರೋಗ್ಯ ಸಂಸ್ಥೆಗಳಲ್ಲಿ ಪಾರದರ್ಶಕತೆ ಹಾಗೂ ನಗರದಲ್ಲಿ ಭದ್ರತಾ ಶಿಷ್ಠಾಚಾರಗಳನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯ ವೈದ್ಯಾಧಿಕಾರಿಗಳ ಸಹಕಾರದೊಂದಿಗೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಪೊಲೀಸ್ ವಕ್ತಾರರು ತಿಳಿಸಿದ್ದಾರೆ.
ಅಲ್ಲದೇ, ಜಿಲ್ಲಾ ಆಸ್ಪತ್ರೆಗಳು, ಖಾಸಗಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ವೈದ್ಯರು ಹಾಗೂ ಸಿಬ್ಬಂದಿಗೆ ಒದಗಿಸಿರುವ ಲಾಕರ್‌ಗಳನ್ನು ದುರುಪಯೋಗವಾಗದಂತೆ ತಡೆಗಟ್ಟಲು ಈ ಕಾರ್ಯಾಚರಣೆ ನಡೆಸಲಾಗಿದೆ. ಆಸ್ಪತ್ರೆಗಳಲ್ಲಿನ ಆಂತರಿಕ ಭದ್ರತೆಗಾಗಿ ಆಗಾಗ ಈ ರೀತಿಯ ಶೋಧ ಕಾರ್ಯಾಚರಣೆಗಳು ನಡೆಯಲಿವೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ನಗರದ ರಾಸಾಯನಿಕ ಹಾಗೂ ರಸಗೊಬ್ಬರ ಮಳಿಗೆಗಳಲ್ಲೂ ಶ್ರೀನಗರ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.