ADVERTISEMENT

'ಕಾಶ್ಮೀರದ ನಾಯಕರನ್ನು ಒಬ್ಬರ ನಂತರ ಮತ್ತೊಬ್ಬರು ಎಂಬಂತೆ ಬಂಧಮುಕ್ತ ಮಾಡಲಾಗುವುದು'

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2019, 13:43 IST
Last Updated 3 ಅಕ್ಟೋಬರ್ 2019, 13:43 IST
ಗುರುವಾರ ಶ್ರೀನಗರದಲ್ಲಿ ಕಂಡು ಬಂದ ದೃಶ್ಯ
ಗುರುವಾರ ಶ್ರೀನಗರದಲ್ಲಿ ಕಂಡು ಬಂದ ದೃಶ್ಯ   

ಶ್ರೀನಗರ: ಸಂವಿಧಾನದ 370ನೇ ವಿಧಿ ರದ್ದು ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳುವ ಹೊತ್ತಲ್ಲಿ ಆಗಸ್ಟ್ 5ರಂದು ಗೃಹ ಬಂಧನದಲ್ಲಿರಿಸಲಾದ ಕಾಶ್ಮೀರದ ರಾಜಕೀಯ ಮುಖಂಡರನ್ನು ಒಬ್ಬರ ನಂತರ ಮತ್ತೊಬ್ಬರು ಎಂಬ ರೀತಿಯಲ್ಲಿ ಬಂಧಮುಕ್ತಗೊಳಿಸಲಾಗುವುದು ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್‌ರ ಸಲಹೆಗಾರರು ಹೇಳಿದ್ದಾರೆ.

ಜಮ್ಮು ಕಾಶ್ಮೀರದ ನಾಯಕರನ್ನು ಯಾವಾಗ ಬಿಡುಗಡೆ ಮಾಡುತ್ತೀರಿ ಎಂದು ಕೇಳಿದಾಗ, ಪ್ರತಿಯೊಬ್ಬ ವ್ಯಕ್ತಿಗಳ ಬಗ್ಗೆ ಸರಿಯಾಗಿ ಅರಿತುಕೊಂಡ ನಂತರ ಒಬ್ಬೊಬ್ಬರಾಗಿಯೇ ಅವರನ್ನು ಬಿಡುಗಡೆ ಮಾಡಲಾಗುವುದು ಎಂದು ಮಲಿಕ್‌ರ ಸಲಹೆಗಾರ ಫರೂಖ್ ಖಾನ್ ಹೇಳಿರುವುದಾಗಿ ಎಎನ್‌ಐ ಸುದ್ದಿಸಂಸ್ಥೆ ವರದಿ ಮಾಡಿದೆ.

ಬುಧವಾರ ಜಮ್ಮು ಪ್ರದೇಶದಲ್ಲಿನ ವಿಪಕ್ಷದ ಹಿರಿಯ ನಾಯಕರನ್ನು ಅವರವರ ಮನೆಗೆ ಕಳಿಸಿಕೊಟ್ಟಿದ್ದು, ರಾಜಕೀಯ ಚಟುವಟಿಕೆ ಮುಂದುವರಿಸಲು ಅನುಮತಿ ನೀಡಲಾಗಿದೆ. ಅಕ್ಟೋಬರ್ 24ರಂದು ಇಲ್ಲಿ ಮೊದಲ ಬಾರಿ ಬ್ಲಾಕ್ ಅಭಿವೃದ್ಧಿ ಕೌನ್ಸಿಲ್ ಚುನಾವಣೆ ನಡೆಯುತ್ತಿದ್ದು, ಅದರ ಪೂರ್ವಭಾವಿಯಾಗಿ ಜಮ್ಮುವಿನವಿಪಕ್ಷ ನಾಯಕರ ಮೇಲೆ ಹೇರಿದ್ದ ನಿರ್ಬಂಧವನ್ನು ತೆರವು ಮಾಡಲಾಗಿದೆ.

ಮಂಗಳವಾರ ತಡರಾತ್ರಿ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕರೆ ಮಾಡಿದ್ದು, ನಿರ್ಬಂಧಗಳನ್ನು ತೆರವು ಮಾಡಲಾಗಿದೆ. ನೀವು ಎಲ್ಲಿಗೆ ಬೇಕಾದರೂ ಹೋಗಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡಬಹುದು ಎಂದು ನ್ಯಾಷನಲ್ ಕಾನ್ಫರೆನ್ಸ್ ಪ್ರಾದೇಶಿಕ ಅಧ್ಯಕ್ಷ ಮತ್ತು ಜಮ್ಮು ಕಾಶ್ಮೀರದ ಮಾಜಿ ಸಚಿವ ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಡಾ. ಜಿತೇಂದ್ರ ಸಿಂಗ್ ಅವರ ಕಿರಿಯ ಸಹೋದರ ದೇವೇಂದ್ರ ರಾಣಾ ಹೇಳಿರುವುದಾಗಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.

ಮನೆಯಿಂದ ಹೊರಗೆ ಹೋಗುವಂತೆ ಅನುಮತಿ ನೀಡಿದ್ದು ನಿರ್ಬಂಧ ತೆರವು ಮಾಡಲಾಗಿದೆ.ಮನೆಯ ಹೊರಗೆ ಪೊಲೀಸ್ ಕಾವಲು ಇದ್ದದ್ದನ್ನೂ ತೆಗೆಯಲಾಗಿದೆ ಎಂದು ಕಾಶ್ಮೀರದ ಮಾಜಿ ಸಚಿವ ಸಜ್ಜದ್ ಕಿಚ್‌ಲೂ ಮತ್ತು ಮಾಜಿ ಎಂಎಲ್‌ಸಿ ಜಾವೇದ್ ರಾಣಾ ಹೇಳಿದ್ದಾರೆ.

ಶನಿವಾರ ಕಾಶ್ಮೀರ ಕಣಿವೆಯಲ್ಲಿ ನಿರ್ಬಂಧವನ್ನು ಮತ್ತೆ ಹೇರಿದ್ದರಿಂದ ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಮತ್ತೆ ಬದಲಾಗಿದೆ. ವಿಶ್ವಸಂಸ್ಥೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಭಾಷಣ ಮುಗಿಸುತ್ತಿದ್ದಂತೆ ಶ್ರೀನಗರದ ಹಲವೆಡೆ ಪ್ರತಿಭಟನೆಗಳು ನಡೆದಿವೆ.

ಶ್ರೀನಗರದಲ್ಲಿ ಸಿಆರ್‌ಪಿಎಫ್ ಸಿಬ್ಬಂದಿಗಳ ಮೇಲೆ ಗ್ರೆನೇಡ್ ಎಸೆದಿದ್ದು, ಗುರಿ ತಪ್ಪಿತ್ತು. ಆಗಸ್ಟ್ 5ರಂದು ಜಮ್ಮು ಕಾಶ್ಮೀರ ವಿಶೇಷಾಧಿಕಾರ ರದ್ದು ಮಾಡಿದ ನಂತರ ನಡೆದ ಮೊದಲ ಉಗ್ರ ಕೃತ್ಯ ಇದು ಎಂದು ಸಿಆರ್‌ಪಿಎಫ್ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.