
ಶ್ರೀನಗರ: ‘ರಾಷ್ಟ್ರೀಯವಾದಿ ಹಿಂದೂಗಳು’ ವಾಸವಿರುವ ಕಿಶ್ತ್ವಾರ್ ಪ್ರದೇಶವನ್ನು ಜಮ್ಮು ಮತ್ತು ಕಾಶ್ಮೀರ ಸರ್ಕಾರವು ನಿರ್ಲಕ್ಷಿಸುತ್ತಿದೆ ಎಂದು ಬಿಜೆಪಿ ಶಾಸಕಿ ಶಗುನ್ ಪರಿಹಾರ್ ಅವರು ಬುಧವಾರ ಆರೋಪಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ವಿಧಾನಸಭಾ ಅಧಿವೇಶನದ ಶೂನ್ಯ ವೇಳೆಯಲ್ಲಿ ಅವರು ಮಾತನಾಡಿದ್ದಾರೆ. ಅವರ ಹೇಳಿಕೆಯ ನಂತರ ಸದನದಲ್ಲಿ ಕೋಲಾಹಲ ಉಂಟಾಗಿದೆ.
ಶಗುನ್ ಪರಿಹಾರ್ ಅವರ ಹೇಳಿಕೆಯನ್ನು ವಿರೋಧಿಸಿರುವ ಉಪ ಮುಖ್ಯಮಂತ್ರಿ ಸುರಿಂದರ್ ಚೌಧರಿ ‘ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳಷ್ಟೇ ಮುಸ್ಲಿಂ, ಸಿಖ್ ಹಾಗೂ ಕ್ರೈಸ್ತರು ಕೂಡ ರಾಷ್ಟ್ರೀಯವಾದಿಗಳು’ ಎಂದು ಹೇಳಿದ್ದಾರೆ.
‘ಸರ್ಕಾರವು ಧರ್ಮದ ಆಧಾರದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಇದು ಕೋಮುವಾದಿ ಹೇಳಿಕೆಯಾಗಿದ್ದು, ಸದನದ ಕಡತದಿಂದ ಈ ಹೇಳಿಕೆಯನ್ನು ತೆಗೆಯಬೇಕು’ ಎಂದು ಸಚಿವ ಜಾವಿದ್ ದಾರ್ ಆಗ್ರಹಿಸಿದ್ದಾರೆ.
'ಈ ದೇಶಕ್ಕಾಗಿ ಸಾವಿರಾರು ಜನ ಮುಸಲ್ಮಾನರು ಪ್ರಾಣ ತ್ಯಾಗ ಮಾಡಿದ್ದಾರೆ. ಅವರನ್ನು ಅವಮಾನಿಸುವುದು ಸರಿಯಲ್ಲ’ ಎಂದು ಎನ್‌ಸಿ ಪಕ್ಷದ ಶಾಸಕ ನಜೀರ್ ಅಹ್ಮದ್ ಖಾನ್ ಕಿಡಿಕಾರಿದ್ದಾರೆ.
‘ನೀವು ಇದೇ ಮೊದಲ ಬಾರಿಗೆ ಸದನವನ್ನು ಪ್ರವೇಶಿಸಿದ್ದು, ಮಾತನಾಡುವಾಗ ಎಚ್ಚರಿಕೆಯಿಂದ ಪದಗಳನ್ನು ಬಳಸಿ. ವಿವಾದಾತ್ಮಕ ಪದಗಳನ್ನು ಸದನದಲ್ಲಿ ಬಳಸಬೇಡಿ’ ಎಂದು ಸ್ಪೀಕರ್ ಅಬ್ದುಲ್ ರಹೀಮ್ ಅವರು ಶಗುನ್ ಪರಿಹಾರ್ ಅವರಿಗೆ ಎಚ್ಚರಿಕೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.