
ಭದ್ರತಾ ಪಡೆ
ಶ್ರೀನಗರ: ನಿಷೇಧಿತ ಜೈಷ್–ಎ–ಮೊಹಮ್ಮದ್ (ಜೆಇಎಂ) ಮತ್ತು ಅನ್ಸಾರ್ ಗಜ್ವತ್–ಉಲ್–ಹಿಂದ್ ಸಂಘಟನೆಗಳೊಂದಿಗೆ ನಂಟು ಹೊಂದಿದ್ದ ಅಂತರ ರಾಜ್ಯ ಮತ್ತು ಅಂತರರಾಷ್ಟ್ರೀಯ ಉಗ್ರ ಜಾಲವನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಭೇದಿಸಿ ಎಂಟು ಮಂದಿಯನ್ನು ಬಂಧಿಸಿದ್ದಾರೆ.
‘ಬಂಧಿತರಲ್ಲಿ ಮೂವರು ವೈದ್ಯರು ಇದ್ದಾರೆ. ಕಾರ್ಯಾಚರಣೆ ವೇಳೆ ಅಪಾರ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಮತ್ತು ಕಚ್ಚಾಬಾಂಬ್ ತಯಾರಿಕೆಗೆ ಬಳಸುವ 2,900 ಕೆ.ಜಿ ವಸ್ತುಗಳು ಹಾಗೂ ಎಲೆಕ್ಟ್ರಾನಿಕ್ ಸಾಧನಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದರು.
ಹರಿಯಾಣ, ಉತ್ತರ ಪ್ರದೇಶ ಮತ್ತು ಜಮ್ಮು–ಕಾಶ್ಮೀರ ಪೊಲೀಸರು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಉಗ್ರರ ಜಾಲ ವನ್ನು ಭೇದಿಸಿದ್ದಾರೆ. ಶ್ರೀನಗರ, ಅನಂತನಾಗ್, ಗಾಂದೇರ್‌ಬಲ್, ಶೋಪಿಯಾನ್ ಜಿಲ್ಲೆಗಳಲ್ಲಿ ಮತ್ತು ಹರಿಯಾಣದ ಫರೀದಾಬಾದ್, ಉತ್ತರ ಪ್ರದೇಶದ ಸಹಾರನಪುರದಲ್ಲಿಯೂ ಶೋಧ ನಡೆಸಲಾಗಿತ್ತು ಎಂದು ಅವರು ಮಾಹಿತಿ ನೀಡಿದರು.
ಬಂಧಿತರನ್ನು ಆರಿಫ್ ನಿಸಾರ್ ದಾರ್ ಅಲಿಯಾಸ್ ಸಾಹಿಲ್, ಯಾಸಿರ್–ಉಲ್–ಅಶ್ರಫ್, ಮಸೂದ್ ಅಹ್ಮದ್ ದಾರ್ ಅಲಿಯಾಸ್ ಶಾಹೀದ್, ಮೌಲ್ವಿ ಇರ್ಫಾನ್ ಅಹ್ಮದ್, ಜಮೀರ್ ಅಹ್ಮದ್ ಅಹಂಗರ್ ಅಲಿಯಾಸ್ ಮುಲ್ತಾಶಾ, ಡಾ.ಮುಜಮ್ಮಿಲ್ ಅಹ್ಮದ್ ಅಲಿಯಾಸ್ ಮುಸೈಬ್, ಡಾ.ಆದಿಲ್, ಡಾ.ಶಾಹೀನ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದರು.
ಜನರನ್ನು ಗುರುತಿಸಿ ಭಯೋತ್ಪಾದಕ ಸಂಘಟನೆಗಳಿಗೆ ನೇಮಕ ಮಾಡಿಕೊಳ್ಳುವುದೂ ಸೇರಿದಂತೆ ಹಲವು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾದ ಆರೋಪ ಬಂಧಿತರ ಮೇಲಿವೆ ಎಂದರು.
ವೃತ್ತಿಪರರನ್ನು ಬಳಸಿ ಉಗ್ರ ಚಟುವಟಿಕೆ
‘ಅಕ್ಟೋಬರ್ 19ರಂದು ಬುನ್‌ಪೊರಾ ನೌಗಾಮ್ ಪ್ರದೇಶದ ಹಲವು ಕಡೆಗಳಲ್ಲಿ ಜೈಷ್ ಸಂಘಟನೆಯು ಪೋಸ್ಟರ್‌ಗಳನ್ನು ಅಂಟಿಸಿತ್ತು. ಅದರಲ್ಲಿ ಪೊಲೀಸ್ ಮತ್ತು ಭದ್ರತಾ ಪಡೆಗಳಿಗೆ ಬೆದರಿಕೆಯೊಡ್ಡಲಾಗಿತ್ತು’ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದರು.
‘ಇದರನ್ವಯ ಕಾನೂನುಬಾಹಿರ ಚಟುವಟಿಕೆ (ತಡೆ) ಕಾಯ್ದೆ (ಯುಎಪಿಎ), ಭಾರತೀಯ ನ್ಯಾಯ ಸಂಹಿತೆ ಮತ್ತಿತರ ಸಂಬಂಧಿತ ಕಾಯ್ದೆಗಳ ವಿವಿಧ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು’ ಎಂದು ಹೇಳಿದರು.
‘ಪಾಕಿಸ್ತಾನ ಮತ್ತು ಇತರ ದೇಶಗಳಲ್ಲಿದ್ದುಕೊಂಡು ಇಲ್ಲಿನ ವೈದ್ಯರು, ಇತರ ವೃತ್ತಿಪರರು ಮತ್ತು ವಿದ್ಯಾರ್ಥಿಗಳ ಜಾಲವನ್ನು ಬಳಸಿಕೊಂಡು ಉಗ್ರ ಚಟುವಟಿಕೆ ನಡೆಸುತ್ತಿರುವುದು ತನಿಖೆಯಲ್ಲಿ ಬಯಲಾಗಿತ್ತು’ ಎಂದು ಅವರು ತಿಳಿಸಿದರು. ಉಗ್ರ ಚಟುವಟಿಕೆಗಳಿಗಾಗಿ ವೃತ್ತಿಪರ ಮತ್ತು ಅಕಾಡೆಮಿಕ್ ಜಾಲಗಳ ಮೂಲಕ ಸಾಮಾಜಿಕ ಕಾರ್ಯಗಳ ಸೋಗಿನಲ್ಲಿ ಹಣವನ್ನು ಸಂಗ್ರಹಿಸಲಾಗುತ್ತಿತ್ತು ಎಂದೂ ಹೇಳಿದರು.
ಪೋಸ್ಟರ್‌ಗಳಿಂದ ಜಾಲದ ಸುಳಿವು
ಅಕ್ಟೋಬರ್ 19ರಂದು ಪೋಸ್ಟರ್‌ಗಳು ಪತ್ತೆಯಾದ ಬಳಿಕ ಅದರ ಜಾಡು ಹಿಡಿದು ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪೋಸ್ಟರ್ ಹಿಂದೆ ವೈದ್ಯ ಮುಜಮ್ಮಿಲ್ ಇರುವುದು ಪತ್ತೆಯಾಗಿತ್ತು. ಜಮ್ಮು ಮತ್ತು ಕಾಶ್ಮೀರ ಪೊಲೀಸರು ಇದರ ಜಾಡು ಹಿಡಿದು ಹರಿಯಾಣಕ್ಕೆ ತೆರಳಿ ಮುಜಮ್ಮಿಲ್ ವಿಚಾರಣೆ ನಡೆಸಿದ್ದರು.
ಈ ಸಂದರ್ಭದಲ್ಲಿ ನಿವಾಸದಲ್ಲಿ ಕೆಲ ರಾಸಾಯನಿಕ ವಸ್ತುಗಳಿರುವುದಾಗಿ ಆತ ಬಾಯ್ಬಿಟ್ಟಿದ್ದ. ಮನೆಯಲ್ಲಿ ಪರಿಶೀಲಿಸಿದಾಗ ಅದು ಶಸ್ತ್ರಾಸ್ತ್ರ, ಸ್ಫೋಟಕ, ಬಾಂಬ್‌ಗಳ ಸಂಗ್ರಹಾಗಾರವಾಗಿತ್ತು. ಮತ್ತೆ ಮುಜಮ್ಮಿಲ್‌ನನ್ನು ವಿಚಾರಣೆಗೆ ಒಳಪಡಿಸಿದಾಗ ಮತ್ತೊಬ್ಬ ವೈದ್ಯ ಆದಿಲ್ ಹೆಸರು ಬಹಿರಂಗವಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಆದಿಲ್‌ನನ್ನೂ ಬಂಧಿಸಿದರು. ಆತನಿಂದ ಪಡೆದ ಮಾಹಿತಿ ಆಧಾರದಲ್ಲಿ ಕಾರ್ಯಾಚರಣೆ ನಡೆಸಿ ಉಳಿದವರನ್ನು ಬಂಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.