ADVERTISEMENT

ಜಮ್ಮು | ಮುಂದುವರಿದ ಮಳೆ: ಸಂಚಾರ ಅಸ್ತವ್ಯಸ್ತ

ಪಿಟಿಐ
Published 7 ಸೆಪ್ಟೆಂಬರ್ 2025, 13:35 IST
Last Updated 7 ಸೆಪ್ಟೆಂಬರ್ 2025, 13:35 IST
   

ಜಮ್ಮು : ಭಾರಿ ಮಳೆಯಿಂದ ಸಂಭವಿಸಿದ ಭೂಕುಸಿತದಿಂದ ಜಮ್ಮು–ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರವನ್ನು ಸತತ ಆರನೇ ದಿನವಾದ ಭಾನುವಾರ ಸಹ ಸ್ಥಗಿತಗೊಳಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದರು. 

ರಸ್ತೆ ದುರಸ್ತಿಯಾಗುವವರೆಗೆ ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸಲಹೆ ನೀಡಲಾಗಿದೆ ಎಂದರು.

ಮಾತಾ ವೈಷ್ಣೋದೇವಿ ದೇಗುಲ ಯಾತ್ರೆಯನ್ನೂ ಸತತ 13 ದಿನಗಳಿಂದ ಸ್ಥಗಿತಗೊಳಿಸಲಾಗಿದೆ. ಈ ಮಧ್ಯೆ ಗಡಿ ರಸ್ತೆಗಳ ಸಂಸ್ಥೆಯು (ಬಿಆರ್‌ಒ) ಬಸೋಹಲಿ–ಬನಿ ರಸ್ತೆಯನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಿದೆ ಎಂದು ಹೇಳಿದರು.

ADVERTISEMENT

ರಸ್ತೆಗೆ ಅಡ್ಡಲಾಗಿ ಬಿದ್ದಿರುವ ಬಂಡೆಕಲ್ಲುಗಳ ತೆರವಿಗಾಗಿ ಸ್ಫೋಟಕಗಳನ್ನು ಬಳಸಲಾಗುತ್ತಿದೆ. ಮಳೆಯ ನಡುವೆಯೂ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ರಂಬನ್‌ ಸೆಕ್ಟರ್‌ನ ಎನ್‌ಎಚ್‌ಎಐ ಯೋಜನಾ ವ್ಯವಸ್ಥಾಪಕ ಶುಭಮ್‌ ತಿಳಿಸಿದರು. 

ಯಮುನಾ ನದಿ ನೀರಿನ ಮಟ್ಟ ಇಳಿಕೆ
ನವದೆಹಲಿಯ ಹಳೆಯ ರೈಲ್ವೆಸೇತುವೆ ಸಮೀಪ ಯಮುನಾ ನದಿಯ ನೀರಿನ ಮಟ್ಟ ಭಾನುವಾರ 205.56 ಮೀಟರ್‌ಗೆ ತಗ್ಗಿದೆ ಎಂದು ಅಧಿಕಾರಿಗಳು ತಿಳಿಸಿದರು. ನಗರದಲ್ಲಿ ನದಿಯ ನೀರು 204.50 ಮೀಟರ್‌ ತಲುಪಿದಾಗ ಎಚ್ಚರಿಕೆ ನೀಡಲಾಗುತ್ತಿದೆ. 205.33 ಮೀಟರ್ ಅಪಾಯಕಾರಿ ಮಟ್ಟವಾಗಿದ್ದು 206 ಮೀಟರ್‌ಗೆ ಏರಿದ ನಂತರ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತದೆ. ತಗ್ಗು ಪ್ರದೇಶಗಳ ಜನರಿಗಾಗಿ ದೆಹಲಿ–ಮೇರಠ್ ಎಕ್ಸ್‌ಪ್ರೆಸ್‌ ವೇ ಮತ್ತು ಮಯೂರ್‌ ವಿಹಾರ್‌ ಪ್ರದೇಶದಲ್ಲಿ ತಾತ್ಕಾಲಿಕ ಶಿಬಿರಗಳನ್ನು ನಿರ್ಮಿಸಲಾಗಿದೆ.

ಮುಂಗಾರು: ಹಿಮಾಚಲದಲ್ಲಿ ₹4079 ಕೋಟಿ ನಷ್ಟ

ಶಿಮ್ಲಾ : ಹಿಮಾಚಲ ಪ್ರದೇಶದಲ್ಲಿ ಜೂನ್‌ 20ರಿಂದ ಸೆಪ್ಟೆಂಬರ್‌ 7ರವರೆಗೆ ಸಂಭವಿಸಿದ ಮೇಘಸ್ಫೋಟ ಹಠಾತ್‌ ಪ್ರವಾಹ ಮತ್ತು ಭೂಕುಸಿತದ ಅವಘಡಗಳಿಂದ ₹4079 ಕೋಟಿ ನಷ್ಟ ಸಂಭವಿಸಿದೆ ಎಂದು ಅಧಿಕಾರಿಗಳು ಭಾನುವಾರ ಅಂದಾಜಿಸಿದ್ದಾರೆ. ಈ ಅವಧಿಯಲ್ಲಿ ಮಳೆ ಸಂಬಂಧಿ ಅವಘಡಗಳು ಮತ್ತು ರಸ್ತೆ ಅಪಘಾತಗಳಿಂದಾಗಿ ರಾಜ್ಯದಲ್ಲಿ 366 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.