ADVERTISEMENT

ಸಲ್ಮಾನ್ ರಶ್ದಿ ಮೇಲಿನ ದಾಳಿ ಮತಾಂಧರ ಕೃತ್ಯ: ಸಾಹಿತಿ ಜಾವೇದ್ ಅಖ್ತರ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 13 ಆಗಸ್ಟ್ 2022, 10:55 IST
Last Updated 13 ಆಗಸ್ಟ್ 2022, 10:55 IST
ಜಾವೇದ್ ಅಖ್ತರ್ ಹಾಗೂ  ಸಲ್ಮಾನ್ ರಶ್ದಿ
ಜಾವೇದ್ ಅಖ್ತರ್ ಹಾಗೂ ಸಲ್ಮಾನ್ ರಶ್ದಿ   

ಬೆಂಗಳೂರು: ನ್ಯೂಯಾರ್ಕ್‌ನಲ್ಲಿ ಭಾರತ ಮೂಲದ ಖ್ಯಾತ ಕಾದಂಬರಿಕಾರ ಸಲ್ಮಾನ್ ರಶ್ದಿ ಮೇಲೆ ನಡೆದ ದಾಳಿಯನ್ನು ಜಗತ್ತಿನದಾದ್ಯಂತ ಅನೇಕ ಲೇಖಕರು, ಸಾಹಿತಿಗಳು, ಗಣ್ಯರು ಖಂಡಿಸಿದ್ದಾರೆ.

ಚಿತ್ರ ಸಾಹಿತಿ ಜಾವೇದ್ ಅಖ್ತರ್ ಕೂಡ ರಶ್ದಿ ಮೇಲಿನ ದಾಳಿಯನ್ನು ಖಂಡಿಸಿದ್ದು, ‘ಇದು ಮತಾಂಧರಅನಾಗರಿಕ ದಾಳಿ’ ಎಂದು ಹೇಳಿದ್ದಾರೆ. ‘ನ್ಯೂಯಾರ್ಕ್‌ ಪೊಲೀಸ್ ಹಾಗೂ ಅಲ್ಲಿನ ಕೋರ್ಟ್‌ ದಾಳಿ ಮಾಡಿದ ವ್ಯಕ್ತಿಯನ್ನು ಸೂಕ್ತವಾಗಿ ಶಿಕ್ಷಿಸುತ್ತದೆ ಎನ್ನುವ ನಂಬಿಕೆ ನನಗೆ ಇದೆ’ ಎಂದು ಟ್ವೀಟ್‌ನಲ್ಲಿ ಅವರು ಹೇಳಿದ್ದಾರೆ.

‘ಜಾವೇದ್ ಅಖ್ತರ್ ಇಸ್ಲಾಮಿಕ್ ಮತಾಂಧ ಸಂಘಟನೆಗಳ ಹೆಸರು ಹೇಳದೇ ‘ಮತಾಂಧರು’ ಎಂದಿದ್ದಾರೆ. ಇದು ಸರಿಯಲ್ಲ’ ಎಂದು ಟ್ವಿಟರ್‌ನಲ್ಲಿ ಚರ್ಚೆಯಾಗುತ್ತಿದೆ.

ADVERTISEMENT

ಈ ಹಿಂದೆ ಖಾಸಗಿ ವಾಹಿನಿಯೊಂದಕ್ಕೆ ಸಂದರ್ಶನ ನೀಡಿದ್ದ ಅಖ್ತರ್ ಅವರು, ರಶ್ದಿ ಅವರ ವಿವಾದಿತ ‘ಸೈತಾನಿಕ್ ವರ್ಸ್‌ಸ್’ ಎಂಬ ಕೃತಿ ಬಗ್ಗೆ ಮಾತನಾಡುವಾಗ, ‘ರಶ್ದಿ ನಾಸ್ತಿಕ ಆಗಿರಬಹುದು, ನಾನೂ ಕೂಡ ನಾಸ್ತಿಕ,ಆದರೆ, ಜೀವನದಲ್ಲಿ ಕೆಲವು ಸಭ್ಯತೆ ಹಾಗೂ ಮೂಲಭೂತ ವಿಚಾರಗಳನ್ನು ತಿಳಿದುಕೊಳ್ಳಬೇಕು’ ಎಂದು ಹೇಳಿದ್ದರು.

ಪಶ್ಚಿಮ ನ್ಯೂಯಾರ್ಕ್‌ನಲ್ಲಿ ಶುಕ್ರವಾರ ಹದಿ ಮತರ್‌ ಎಂಬ 24 ವರ್ಷದ ವ್ಯಕ್ತಿಯಿಂದ ಚಾಕು ಇರಿತಕ್ಕೊಳಗಾಗಿದ್ದ ಸಲ್ಮಾನ್ ರಶ್ದಿ ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರಿಸಲಾಗಿದೆ.ಅವರು ಒಂದು ಕಣ್ಣನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಮತ್ತು ಅವರ ಯಕೃತ್ತು ಸಹ ಹಲ್ಲೆಯಿಂದ ಹಾನಿಗೊಳಗಾಗಿದೆ ಎಂದು ಅವರ ಏಜೆಂಟ್ ತಿಳಿಸಿದ್ದಾರೆ.

ಸಲ್ಮಾನ್ ರಶ್ದಿ ಅವರನ್ನು ಚಾಕುವಿನಿಂದ ಇರಿದಿದ್ದ ಹದಿ ಮತರ್‌ ಎಂಬಾತನನ್ನು ನ್ಯೂಯಾರ್ಕ್ ಪೊಲೀಸರು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.