ADVERTISEMENT

ಭಾರತಕ್ಕ ಆಗಮಿಸಿದ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್: ಅಶ್ವಿನಿ ವೈಷ್ಣವ್ ಸ್ವಾಗತ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಏಪ್ರಿಲ್ 2025, 5:06 IST
Last Updated 21 ಏಪ್ರಿಲ್ 2025, 5:06 IST
   

ನವದೆಹಲಿ: ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಮತ್ತು ಅಮೆರಿಕದ ಎರಡನೇ ಮಹಿಳೆ ಉಷಾ ಮೊದಲ ಅಧಿಕೃತ ಭೇಟಿಗಾಗಿ ಭಾರತಕ್ಕೆ ಆಗಮಿಸಿದ್ದಾರೆ. ದೆಹಲಿಯ ಪಾಲಂ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರನ್ನು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸ್ವಾಗತಿಸಿದ್ದಾರೆ.

ಜೆ.ಡಿ. ವ್ಯಾನ್ಸ್ ದಂಪತಿಗೆ ಗಾರ್ಡ್ ಅಫ್ ಹಾನರ್ ಗೌರವದ ಮೂಲಕ ಸ್ವಾಗತಿಸಲಾಯಿತು.

ವ್ಯಾನ್ಸ್ ಮತ್ತು ಅವರ ಕುಟುಂಬವು ತಮ್ಮ ನಾಲ್ಕು ದಿನಗಳ ಭಾರತ ಪ್ರವಾಸದ ಸಮಯದಲ್ಲಿ ಜೈಪುರ ಮತ್ತು ಆಗ್ರಾಕ್ಕೂ ಭೇಟಿ ನೀಡಲಿದ್ದಾರೆ.

ADVERTISEMENT

ಇಂದು ಸಂಜೆ, ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಉಪಾಧ್ಯಕ್ಷರೊಂದಿಗೆ ಮಾತುಕತೆ ನಡೆಸಲಿದ್ದು, ನಂತರ ವ್ಯಾನ್ಸ್ ದಂಪತಿಗೆ ಔತಣ ಕೂಟವನ್ನು ಆಯೋಜಿಸಲಿದ್ದಾರೆ.

ಮೋದಿ–ವ್ಯಾನ್ಸ್ ಮಾತುಕತೆ ವೇಳೆ ರಕ್ಷಣಾ ವಲಯ, ಪರಮಾಣು, ವ್ಯಾಪಾರ ಮತ್ತು ಮಾನವ ಕಳ್ಳಸಾಗಣೆ ತಡೆ ಕುರಿತಂತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ಸುಮಾರು 60 ದೇಶಗಳ ಮೇಲೆ ಪ್ರತಿ ಸುಂಕ ವಿಧಿಸಿ, ಅದಕ್ಕೆ 90 ದಿನಗಳ ವಿರಾಮ ನೀಡಿದ ವಾರಗಳ ನಂತರ ವ್ಯಾನ್ಸ್ ಅವರು ಭಾರತಕ್ಕೆ ಭೇಟಿ ನೀಡಿದ್ದಾರೆ.

ಭಾರತ ಮತ್ತು ಅಮೆರಿಕ ಈಗ ಸುಂಕ ಮತ್ತು ಮಾರುಕಟ್ಟೆ ಪ್ರವೇಶ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹರಿಸುವ ನಿರೀಕ್ಷೆಯಿರುವ ದ್ವಿಪಕ್ಷೀಯ ವ್ಯಾಪಾರ ಒಪ್ಪಂದವನ್ನು ಕಾರ್ಯಗತಗೊಳಿಸುವ ಕುರಿತಂತೆ ಮಾತುಕತೆ ನಡೆಸುತ್ತಿವೆ.

ಕೆಲವೇ ತಾಸುಗಳಲ್ಲಿ ವ್ಯಾನ್ಸ್ ದಂಪತಿ ಸ್ವಾಮಿನಾರಾಯಣ ಅಕ್ಷರಧಾಮ ದೇವಸ್ಥಾನಕ್ಕೆ ಭೇಟಿ ನೀಡಲಿದ್ದಾರೆ. ಅವರು ಭಾರತದ ಸಾಂಪ್ರದಾಯಿಕ ಕರಕುಶಲ ವಸ್ತುಗಳನ್ನು ಮಾರಾಟ ಮಾಡುವ ಮಾರುಕಟ್ಟೆಯೊಂದಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.