ADVERTISEMENT

ಜೆಡಿಯು ಎಲ್ಲೂ ಗೆಲ್ಲಲಿಲ್ಲ, ಠೇವಣಿಯೂ ದಕ್ಕಲಿಲ್ಲ

ಬಿಹಾರದ ಹೊರಗೆ ನೆಲೆ ವಿಸ್ತರಣೆಯ ನಿತೀಶ್‌ ಪ್ರಯತ್ನಕ್ಕೆ ಹಿನ್ನಡೆ

ಅಭಯ್ ಕುಮಾರ್
Published 16 ಡಿಸೆಂಬರ್ 2018, 20:15 IST
Last Updated 16 ಡಿಸೆಂಬರ್ 2018, 20:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪಟ್ನಾ: ಬಿಹಾರದಿಂದ ಹೊರಗೆ ಜೆಡಿಯುನ ನೆಲೆ ವಿಸ್ತರಿಸುವ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರ ಮಹತ್ವಾಕಾಂಕ್ಷೆ ಆರಂಭದಲ್ಲಿಯೇ ಎಡವಿಬಿದ್ದಿದೆ. ಹಿಂದಿ ಭಾಷಿಕ ರಾಜ್ಯಗಳಾದ ಛತ್ತೀಸಗಡ, ಮಧ್ಯ ಪ್ರದೇಶ ಮತ್ತು ರಾಜಸ್ಥಾನದಲ್ಲಿ ಜೆಡಿಯು ಅಭ್ಯರ್ಥಿಗಳಲ್ಲಿ ಯಾರಿಗೂ ಠೇವಣಿ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ.

ರಾಜಸ್ಥಾನದಲ್ಲಿ ಜೆಡಿಯುನ 12 ಅಭ್ಯರ್ಥಿಗಳು ಕಣದಲ್ಲಿದ್ದರು. ಅವರ ಪೈಕಿ ಬನ್‌ಸ್ವಾರಾ ಕ್ಷೇತ್ರದ ಅಭ್ಯರ್ಥಿಗೆ ಗರಿಷ್ಠ ಅಂದರೆ 5,009 ಮತಗಳು ಸಿಕ್ಕಿವೆ. ಘಾಟೋರ್‌ ಕ್ಷೇತ್ರದಲ್ಲಿ 912, ಭೀಮ್‌ನಲ್ಲಿ 417, ಪರ್ಬತ್ಸರ್‌ನಲ್ಲಿ 281, ಜೋತ್ವಾರಾದಲ್ಲಿ 199 ಮತ್ತು ಮಾಳವೀಯ ನಗರದಲ್ಲಿ 161 ಮತಗಳು ಸಿಕ್ಕಿವೆ.

ಛತ್ತೀಸಗಡದಲ್ಲಿ ಜೆಡಿಯುನ ಸಾಧನೆ ಇದಕ್ಕಿಂತ ಭಿನ್ನವೇನಲ್ಲ. ಅಲ್ಲಿನ ಕೇಷ್ಕಲ್‌ ಕ್ಷೇತ್ರದಲ್ಲಿ ಜೆಡಿಯುನ ಬಿಂದೇಶ್‌ ರಾಮ್‌ಗೆ ಸಿಕ್ಕಿದ್ದು 2,008 ಮತಗಳಾದರೆ, ರಾಯಪುರ ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಜೆ.ಪಿ. ತಿವಾರಿ ಪಡೆದದ್ದು 80 ಮತಗಳು ಮಾತ್ರ.

ADVERTISEMENT

ಇದಕ್ಕೂ ಹಿಂದೆ, ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ 27 ಕ್ಷೇತ್ರಗಳಲ್ಲಿ ಜೆಡಿಯು ಸ್ಪರ್ಧಿಸಿತ್ತು. ಎಲ್ಲ ಕ್ಷೇತ್ರಗಳಲ್ಲಿಯೂ ಠೇವಣಿ ನಷ್ಟವಾಗಿತ್ತು. ಕಳೆದ ವರ್ಷ ನಡೆದ ಗುಜರಾತ್‌ ಚುನಾವಣೆಯಲ್ಲಿ ಜೆಡಿಯುನ 38 ಅಭ್ಯರ್ಥಿಗಳು ಕಣದಲ್ಲಿದ್ದರು. ಒಬ್ಬರೂ ಗೆಲ್ಲಲಿಲ್ಲ. ಆದರೆ, ಅವರ ಬದ್ಧ ಶತ್ರು ಶರದ್‌ ಯಾದವ್‌ ಬಣ ನಾಲ್ಕು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಎರಡರಲ್ಲಿ ಗೆದ್ದಿತ್ತು.

ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಒಂದೇ ಒಂದು ಕ್ಷೇತ್ರದಲ್ಲಿ ಗೆಲ್ಲುವುದಕ್ಕೂ ಈ ಪಕ್ಷಕ್ಕೆ ಸಾಧ್ಯವಾಗಿಲ್ಲ.

ರಾಜಧಾನಿಯಲ್ಲಿ ಎಎಪಿ–ಕಾಂಗ್ರೆಸ್‌ ಮೈತ್ರಿ?
ನವದೆಹಲಿ (ಪಿಟಿಐ):
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿನ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಚುನಾವಣಾ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಬದ್ಧ ಪ್ರತಿಸ್ಪರ್ಧಿಗಳಾದ ಎಎಪಿ ಮತ್ತು ಕಾಂಗ್ರೆಸ್‌ ಪಕ್ಷದ ನಡುವೆ ಮಾತುಕತೆ ನಡೆಯುತ್ತಿದೆ ಎಂದು ಮೂಲಗಳು ಹೇಳಿವೆ.

ಎರಡೂ ಪಕ್ಷಗಳ ನಡುವೆ ಹಿಂಬಾಗಿಲ ಮಾತುಕತೆ ನಡೆಯುತ್ತಿದ್ದರೂ ಮೈತ್ರಿಯ ಬಗ್ಗೆ ಅಧಿಕೃತವಾಗಿ ಯಾವುದೇ ಹೇಳಿಕೆ ಪ್ರಕಟ ಆಗಿಲ್ಲ.

ಕಳೆದ ವಾರ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಎಎಪಿ ಮೊದಲ ಬಾರಿಗೆ ಭಾಗವಹಿಸಿತ್ತು. ಅದಾದ ಬಳಿಕ ಕಾಂಗ್ರೆಸ್ ಜತೆಗೆ ಆ ಪಕ್ಷದ ಮೈತ್ರಿಯ ಮಾತಿಗೆ ಹೆಚ್ಚಿನ ಪುಷ್ಟಿ ದೊರೆತಿದೆ.

ದೆಹಲಿ ಮತ್ತು ಪಂಜಾಬ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್‌ ಎದುರಾಳಿ ಪಕ್ಷಗಳು. ಕಾಂಗ್ರೆಸ್‌ ಪರವಾಗಿ ಇರುವುದು ಮತ್ತು ಬಿಜೆಪಿ ಪರವಾಗಿ ಇರುವುದು ಎರಡೂ ಒಂದೇ ಎಂದು ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌ ಅವರು ಆಗಸ್ಟ್‌ವರೆಗೆ ಹೇಳುತ್ತಿದ್ದರು. ರಾಜ್ಯಸಭೆಯ ಉಪಾಧ್ಯಕ್ಷ ಹುದ್ದೆಗೆ ಆಗಸ್ಟ್‌ನಲ್ಲಿ ನಡೆದ ಚುನಾವಣೆಯಲ್ಲಿ ಎಎಪಿ ಸದಸ್ಯರು ಭಾಗವಹಿಸಿರಲಿಲ್ಲ. ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಕಾಂಗ್ರೆಸ್‌ ಕೇಳಿರಲಿಲ್ಲ ಎಂಬುದು ಎಎಪಿಯ ಅತೃಪ್ತಿಗೂ ಕಾರಣವಾಗಿತ್ತು.

ಕಾಂಗ್ರೆಸ್‌ಗೆ ಎಷ್ಟು ಕ್ಷೇತ್ರಗಳನ್ನು ಬಿಟ್ಟುಕೊಡಬೇಕಾಗುತ್ತದೆ ಎಂಬುದು ಸುಲಭದಲ್ಲಿ ಪರಿಹಾರ ಆಗುವ ಸಾಧ್ಯತೆ ಇಲ್ಲ. ಏಳರಲ್ಲಿ ಎರಡಕ್ಕಿಂತ ಹೆಚ್ಚು ಕ್ಷೇತ್ರಗಳನ್ನು ಬಿಟ್ಟುಕೊಡಲು ಎಎಪಿ ಸಿದ್ಧವಿಲ್ಲ. ಆರು ಕ್ಷೇತ್ರಗಳಿಗೆ ಕ್ಷೇತ್ರ ಉಸ್ತುವಾರಿಗಳನ್ನು ಎಎಪಿ ಈಗಾಗಲೇ ನೇಮಿಸಿದೆ. ಅವರನ್ನೇ ಅಭ್ಯರ್ಥಿಗಳಾಗಿ ಕಣಕ್ಕಿಳಿಸುವುದು ಎಎಪಿಯ ಯೋಜನೆ.

ದೆಹಲಿ ಕಾಂಗ್ರೆಸ್‌ನ ಸ್ಥಳೀಯ ಮುಖಂಡರಿಗೆ ಈ ಮೈತ್ರಿಯ ಬಗ್ಗೆ ಒಲವು ಇಲ್ಲ. ಆದರೆ, ಹೈಕಮಾಂಡ್‌ ಮೈತ್ರಿಯ ಪರವಾಗಿದೆ ಎನ್ನಲಾಗಿದೆ.

*
ನಮ್ಮದು ಬಿಹಾರ ಮೂಲದ ಪಕ್ಷ. ರಾಷ್ಟ್ರ ಮಟ್ಟದಲ್ಲಿ ನಮ್ಮ ಅಸ್ತಿತ್ವ ಕಾಣಿಸಿಕೊಳ್ಳಲು ಇನ್ನೂ ಐದು ವರ್ಷ ಬೇಕಾಗಬಹುದು.
–ಪ್ರಶಾಂತ್‌ ಕಿಶೋರ್‌, ಜೆಡಿಯು ಉಪಾಧ್ಯಕ್ಷ

ಸೋಲಿನ ಹಾದಿ
2016: ಕೇರಳ, ಅಸ್ಸಾಂನಲ್ಲಿ ಸ್ಪರ್ಧೆ– ಎಲ್ಲೆಡೆ ಸೋಲು
2017: ಗುಜರಾತ್‌ನ 38 ಕ್ಷೇತ್ರಗಳಲ್ಲಿ ಸ್ಪರ್ಧೆ– ಮತ್ತೆ ಪರಾಜಯ
2018: ಕರ್ನಾಟಕದ 27 ಕ್ಷೇತ್ರಗಳಲ್ಲಿ ಸ್ಪರ್ಧೆ– ಎಲ್ಲೂ ಗೆಲ್ಲಲಿಲ್ಲ
2018: ರಾಜಸ್ಥಾನ, ಛತ್ತೀಸಗಡದಲ್ಲಿ ತಲಾ 12 ಕ್ಷೇತ್ರಗಳಲ್ಲಿ ಸ್ಪರ್ಧೆ– ಎಲ್ಲ ಕಡೆ ಠೇವಣಿ ನಷ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.