ADVERTISEMENT

ಪುಲ್ವಾಮ: ಮೂವರು ಜೆಇಎಂ ಸಹಚರರ ಸೆರೆ, ಎಕೆ–47 ರೈಫಲ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 11:22 IST
Last Updated 1 ಏಪ್ರಿಲ್ 2022, 11:22 IST
ಭದ್ರತಾ ಪಡೆಗಳು (ಸಾಂದರ್ಭಿಕ ಚಿತ್ರ)
ಭದ್ರತಾ ಪಡೆಗಳು (ಸಾಂದರ್ಭಿಕ ಚಿತ್ರ)   

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಶುಕ್ರವಾರ ಜೈಶೆ–ಮೊಹಮ್ಮದ್‌ (ಜೆಇಎಂ) ಉಗ್ರರ ಸಂಚನ್ನು ವಿಫಲಗೊಳಿಸಿರುವ ಪೊಲೀಸರು ಜೆಇಎಂನ ಮೂವರು ಸಹಚರರನ್ನು ಬಂಧಿಸಿದ್ದಾರೆ.

ಪುಲ್ವಾಮದ ಜಂದ್ವಾಲ್‌ ಪ್ರದೇಶದ ನಿವಾಸಿ ಒವೈಸ್‌ ಅಲ್ತಾಫ್‌, ಅಖಿಬ್‌ ಮನ್ಸೂರ್‌, ಕರಿಮಬಾದ್‌ನ ವಸೀಂ ಅಹ್ಮದ್‌ ಪಂಡಿತ್‌ ಬಂಧಿತರು.

‘ಭಾರತೀಯ ಸೇನೆ ಹಾಗೂ ಸಿಆರ್‌ಪಿಎಫ್‌ ಜಂಟಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿದ್ದು, ಈ ಮೂವರು ಜೆಇಎಂ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದರು. ಜಿಲ್ಲೆಯಲ್ಲಿ ಉಗ್ರರಿಗೆ ಸರಕು ಮತ್ತು ಸಾಗಣೆ ವ್ಯವಸ್ಥೆ ಕಲ್ಪಿಸುತ್ತಿದ್ದರು. ಬಂಧಿತರಿಂದ ಎಕೆ–47 ರೈಫಲ್‌, ಮೂರು ಮ್ಯಾಗಜೈನ್‌, 69 ಬಂದೂಕಿನ ಗುಂಡುಗಳು, ಗ್ರೆನೆಡ್‌ ವಶಪಡಿಸಿಕೊಳ್ಳಲಾಗಿದೆ’ ಎಂದು ಪೊಲೀಸ್‌ ವಕ್ತಾರರು ತಿಳಿಸಿದರು.

ADVERTISEMENT

ಶೋಪಿಯಾನ್‌: ಎಲ್‌ಇಟಿ ಉಗ್ರನ ಹತ್ಯೆ
ಶ್ರೀನಗರ:
ದಕ್ಷಿಣ ಕಾಶ್ಮೀರದ ಶೋಪಿಯಾನ್‌ ಜಿಲ್ಲೆಯ ತುರ್ಕವಾಂಗಮ್‌ ಪ್ರದೇಶದಲ್ಲಿ ಶುಕ್ರವಾರ ಭದ್ರತಾ ಪಡೆಗಳು ಲಷ್ಕರ್‌–ಎ–ತೈಬಾ(ಎಲ್‌ಇಟಿ) ಸಂಘಟನೆಯ ಉಗ್ರನೊಬ್ಬನನ್ನು ಹತ್ಯೆ ಮಾಡಿವೆ.

‘ಹತ್ಯೆಯಾದ ಉಗ್ರನನ್ನು ಶೋಪಿಯಾನ್‌ನ ಟಕ್‌ ಮೊಹಲ್ಲಾದ ನಿವಾಸಿ ಮುನೀಬ್‌ ಅಹ್ಮದ್‌ ಶೇಖ್‌ ಎಂದು ಗುರುತಿಸಲಾಗಿದೆ. ಈತ ಹಲವು ಭದ್ರತಾ ಪಡೆ ಹಾಗೂ ನಾಗರಿಕ ದಾಳಿಗಳಲ್ಲಿ ಭಾಗಿಯಾಗಿದ್ದ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

‘ಉಗ್ರರು ಅಡಗಿರುವ ಖಚಿತ ಮಾಹಿತಿ ಮೇರೆಗೆ ಸಿಆರ್‌ಪಿಎಫ್‌ ಹಾಗೂ ಸ್ಥಳೀಯ ಪೊಲೀಸರು ಜಂಟಿ ಶೋಧ ಕಾರ್ಯಾಚರಣೆ ಆರಂಭಿಸಿದ್ದ ವೇಳೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದರು. ಭದ್ರತಾಪಡೆಗಳ ಪ್ರತಿದಾಳಿಗೆ ಎಲ್‌ಇಟಿ ಉಗ್ರ ಹತ್ಯೆಯಾಗಿದ್ದಾನೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.