ADVERTISEMENT

ಜೆಟ್‌ ಏರ್‌ವೇಸ್‌ ಅವಘಡ; ಗಾಳಿಯ ಒತ್ತಡ ಕಾಯ್ದುಕೊಳ್ಳದಿದ್ದರೆ ಪ್ರಾಣಕ್ಕೇ ಕುತ್ತು

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2018, 20:28 IST
Last Updated 20 ಸೆಪ್ಟೆಂಬರ್ 2018, 20:28 IST
ಗಾಳಿಯ ಒತ್ತಡ ತಾಳಲಾರದೆ ಆಮ್ಲಜನಕ ಮುಸುಕು ವ್ಯವಸ್ಥೆ ಬಳಸಿರುವ ವಿಮಾನ ಪ್ರಯಾಣಿಕ 
ಗಾಳಿಯ ಒತ್ತಡ ತಾಳಲಾರದೆ ಆಮ್ಲಜನಕ ಮುಸುಕು ವ್ಯವಸ್ಥೆ ಬಳಸಿರುವ ವಿಮಾನ ಪ್ರಯಾಣಿಕ    

ಮುಂಬೈನಿಂದ ಜೈಪುರಕ್ಕೆ ಹೊರಟಿದ್ದ ಜೆಟ್‌ ಏರ್‌ವೇಸ್ ವಿಮಾನದೊಳಗೆ ಗಾಳಿಯ ಒತ್ತಡ ಕುಸಿದದ್ದೇ ಪ್ರಯಾಣಿಕರ ರಕ್ತಸ್ರಾವಕ್ಕೆ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ಪತ್ತೆಯಾಗಿದೆ. ವಿಮಾನದಲ್ಲಿ ಗಾಳಿಯ ಒತ್ತಡ ಕಾಯ್ದುಕೊಳ್ಳುವ ಅಗತ್ಯತೆಯ ವಿವರ ಈ ಮುಂದಿನಂತಿದೆ-

* ಸಮುದ್ರ ಮತ್ತು ನೆಲಮಟ್ಟದಲ್ಲಿದ್ದಾಗ ವಾತಾವರಣದಲ್ಲಿ ಗಾಳಿಯ ಒತ್ತಡವು ಸಾಮಾನ್ಯ ಸ್ಥಿತಿಯಲ್ಲಿ ಇರುತ್ತದೆ

* ವಿಮಾನವು ಆಗಸದಲ್ಲಿ ಮೇಲೆ ಏರಿದಂತೆಲ್ಲಾ ಗಾಳಿಯ ಒತ್ತಡ ಕಡಿಮೆಯಾಗುತ್ತದೆ

ADVERTISEMENT

* ಸಮುದ್ರಮಟ್ಟದಿಂದ ಸುಮಾರು 8,000 ಅಡಿ ಎತ್ತರದಲ್ಲಿದ್ದಾಗ ಗಾಳಿಯ ಒತ್ತಡ ಶೇ 25ರಷ್ಟು ಕಡಿಮೆಯಾಗಿರುತ್ತದೆ. ಈ ಪ್ರಮಾಣದ ಒತ್ತಡವನ್ನು ಆರೋಗ್ಯವಂತ ಮನುಷ್ಯ ಸಹಿಸಿಕೊಳ್ಳಲು ಶಕ್ತವಾಗಿರುತ್ತಾನೆ

* ಇದಕ್ಕಿಂತಲೂ ಮೇಲೆ ಹೋದಂತೆ ಗಾಳಿಯ ಒತ್ತಡ ಕಡಿಮೆಯಾಗುತ್ತಾ ಹೋಗುತ್ತದೆ. ಹೀಗಾಗಿ ಸುಮಾರು 7,000 ಅಡಿ ಎತ್ತರದಲ್ಲಿ ಇರುವಷ್ಟೇ ಒತ್ತಡವನ್ನು ವಿಮಾನದಲ್ಲಿ ಕೃತಕವಾಗಿ ಸೃಷ್ಟಿಸಲಾಗುತ್ತದೆ. ವಿಮಾನ ಇನ್ನಷ್ಟು ಮೇಲೆ ಹೋದರೂ ಗಾಳಿಯ ಒತ್ತಡ ಒಂದೇ ರೀತಿ ಇರುತ್ತದೆ

* ಜೆಟ್‌ ಏರ್‌ವೇಸ್ ವಿಮಾನದಲ್ಲಿ ಕೃತಕವಾಗಿ ಗಾಳಿಯ ಒತ್ತಡವನ್ನು ಸೃಷ್ಟಿಸುವ ಮತ್ತು ಅದನ್ನು ಕಾಯ್ದುಕೊಳ್ಳುವ ವ್ಯವಸ್ಥೆ ಚಾಲೂ ಮಾಡದ ಕಾರಣ, ಈ ಅನಾಹುತ ಸಂಭವಿಸಿದೆ

* 35,000 ಅಡಿ ಭಾರತದಲ್ಲಿ ಪ್ರಯಾಣಿಕರ ವಿಮಾನವು ಹಾರಾಟ ನಡೆಸುವ ಎತ್ತರ (ಈ ಎತ್ತರದಲ್ಲಿ ಗಾಳಿಯ ಸೆಳೆತ ಕಡಿಮೆ ಇರುವ ಕಾರಣ ವಿಮಾನವು ಭಾರಿ ವೇಗದಲ್ಲಿ ಚಲಿಸುತ್ತದೆ ಮತ್ತು ಇಂಧನದ ದಕ್ಷತೆ ಹೆಚ್ಚಿರುತ್ತದೆ)

* ಇಷ್ಟು ಎತ್ತರದಲ್ಲಿ ಗಾಳಿಯ ಒತ್ತಡವು ತೀರಾ ಕಡಿಮೆ ಪ್ರಮಾಣದಲ್ಲಿ ಇರುತ್ತದೆ. ವಿಮಾನದೊಳಗೂ ಗಾಳಿಯ ಒತ್ತಡ ಕಡಿಮೆಯಾದರೆ, ಕೆಲವೇ ನಿಮಿಷಗಳಲ್ಲಿ ಪ್ರಯಾಣಿಕರು ಸಾವನ್ನಪ್ಪುವ ಅಪಾಯವೂ ಇರುತ್ತದೆ. ಹೀಗಾಗಿ ಗಾಳಿಯ ಒತ್ತಡ ಕುಸಿದ ತಕ್ಷಣ ಆಮ್ಲಜನಕದ ಮಾಸ್ಕ್‌ಗಳು ತೆರೆದುಕೊಳ್ಳುತ್ತವೆ. ಅದರ ಮೂಲಕ ಉಸಿರಾಡಿದರೆ ಪ್ರಾಣಾಪಾಯದಿಂದ ಪಾರಾಗಲು ಅವಕಾಶವಿರುತ್ತದೆ

(ಆಧಾರ: ಬೋಯಿಂಗ್, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ)

‘ತಮಟೆ ಒಡೆದಿದ್ದರೆ ಕಿವುಡು’

ಬೆಂಗಳೂರು: ‘ಕಿವಿಯಲ್ಲಿ ರಕ್ತ ಬಂದ ತಕ್ಷಣ ತಮಟೆ ಒಡೆದಿದೆ ಎಂದು ಹೇಳಲು ಸಾಧ್ಯವಿಲ್ಲ. ಒಂದು ವೇಳೆ ಪೂರ್ಣಪ್ರಮಾಣದಲ್ಲಿ ಒಡೆದಿದ್ದರೆ ಮಾತ್ರ ಕಿವುಡರಾಗುತ್ತಾರೆ’ ಎಂದು ಬೆಂಗಳೂರು ಮೆಡಿಕಲ್‌ ಕಾಲೇಜಿನ ಶ್ವಾಸಕೋಶ ವಿಭಾಗದ ಮುಖ್ಯಸ್ಥ ಡಾ.ನಾಗರಾಜ್‌ ಹೇಳಿದರು.

‘ಕಿವಿ ತಮಟೆಗೆ ಸ್ವಲ್ಪ ಪ್ರಮಾಣದ ಹಾನಿಯಾಗಿದ್ದರೆ ಸರಿಪಡಿಸಬಹುದು. ತಾತ್ಕಾಲಿಕ ಕಿವುಡರಾಗಿದ್ದರೆ ಸಾಕಷ್ಟು ಮಾರ್ಗಗಳಿವೆ. ಕಿವಿ, ಕರುಳು, ಮೂಗು ಹಾಗೂ ದೇಹದ ವಿವಿಧ ಭಾಗಗಳಲ್ಲಿ ಗಾಳಿ ಇರುತ್ತದೆ. ಇದು ಒತ್ತಡಕ್ಕೆ ಹಿಗ್ಗುತ್ತದೆ ಇದರಿಂದ ಕಿವಿ ಹಾಗೂ ಮೂಗಿನಲ್ಲಿ ರಕ್ತ ಬಂದಿದೆ. ಇಂತಹ ಘಟನೆಗಳಿಂದ ಪ್ರಾಣಾಪಾಯದ ಸಾಧ್ಯತೆ ಕಡಿಮೆ. ಒಂದು ವೇಳೆ ಶ್ವಾಸಕೋಶಕ್ಕೆ ಹಾನಿಯಾಗಿದ್ದರೆ ಮಾತ್ರ ಪ್ರಾಣಕ್ಕೆ ತೊಂದರೆಯಾಗುತ್ತಿತ್ತು. ಆದರೆ ಹೀಗೆ ಆಗಿರುವ ಸಾಧ್ಯತೆ ಕಡಿಮೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.