ADVERTISEMENT

ಅಗ್ನಿವೇಶ್ ಮೇಲೆ ಹಲ್ಲೆ: ಜಾರ್ಖಂಡ್‌ ವಿಧಾನಸಭೆಯಲ್ಲಿ ಕೋಲಾಹಲ

​ಪ್ರಜಾವಾಣಿ ವಾರ್ತೆ
Published 18 ಜುಲೈ 2018, 17:06 IST
Last Updated 18 ಜುಲೈ 2018, 17:06 IST

ರಾಂಚಿ (ಪಿಟಿಐ): ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮೇಲೆ ಪಕೂರ್‌ನಲ್ಲಿ ಮಂಗಳವಾರ ನಡೆದ ಹಲ್ಲೆ ಖಂಡಿಸಿ ಜಾರ್ಖಂಡ್ ವಿಧಾನಸಭೆಯಲ್ಲಿ ಬುಧವಾರ ಪ್ರತಿಪಕ್ಷಗಳು ಕೋಲಾಹಲ ಎಬ್ಬಿಸಿದವು.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ರಘುಬರ್ ದಾಸ್ ಅವರು ತನಿಖಾ ಸಮಿತಿ ರಚಿಸಿದ್ದಾರೆ ಎಂದು ಸಂಸದೀಯ ವ್ಯವಹಾರ ಸಚಿವ ನೀಲಕಂಠ ಸಿಂಗ್ ಮುಂಡಾ ಅವರು ಸದನಕ್ಕೆ ಮಾಹಿತಿ ನೀಡಿದರೂ, ಗದ್ದಲ ಕಡಿಮೆಯಾಗಲಿಲ್ಲ.

ಪ್ರಜಾಪ್ರಭುತ್ವದಲ್ಲಿ ಇಂತಹ ಘಟನೆಗಳು ಆಗಬಾರದು ಎಂದ ಮುಂಡಾ ಅವರು, ಕಳೆದ ತಿಂಗಳು ನಡೆದ ಖುಂಟಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಬಗ್ಗೆ ಏಕೆ ಮಾತನಾಡುತ್ತಿಲ್ಲ ಎಂದು ಪ್ರತಿಪಕ್ಷಗಳನ್ನು ಪ್ರಶ್ನಿಸಿದರು. ಇದಕ್ಕೆ ಕೆರಳಿದ ಜೆಎಂಎಂ, ಕಾಂಗ್ರೆಸ್ ಹಾಗೂ ಜಾರ್ಖಂಡ್ ವಿಕಾಸ್ ಮೋರ್ಚಾ ಪಕ್ಷದ ಸದಸ್ಯರು ಕೋಲಾಹಲ ಉಂಟುಮಾಡಿದರು.

ADVERTISEMENT

ತಕ್ಷಣವೇ ಆರೋಪಿಗಳನ್ನು ಬಂಧಿಸುವಂತೆ ವಿರೋಧ ಪಕ್ಷದ ನಾಯಕ ಹೇಮಂತ್ ಸೊರೇನ್ ಆಗ್ರಹಿಸಿದ್ದರು.

ಇದೇ ವಿಚಾರವಾಗಿ ಜಾರ್ಖಂಡ್ ವಿಕಾಸ್ ಮೋರ್ಚಾ ಪಕ್ಷದ ಶಾಸಕ ಪ್ರದೀಪ್ ಯಾದವ್ ಮಂಡಿಸಿದ ನಿಲುವಳಿ ಸೂಚನೆಯನ್ನು ಸ್ಪೀಕರ್ ತಿರಸ್ಕರಿಸಿದರು. ಗದ್ದಲ ಕಡಿಮೆಯಾಗದ ಕಾರಣ ಸದನವನ್ನೂ ಮೂರು ಬಾರಿ ಮುಂದೂಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.