ಜಾರ್ಖಂಡ್ ಉಂಟಾದ ಪ್ರವಾಹದ ವೇಳೆ ತೆಗೆದ ಚಿತ್ರ
ಕೃಪೆ: ಪಿಟಿಐ
ರಾಂಚಿ: ಜಾರ್ಖಂಡ್‌ನಲ್ಲಿ ಈ ವರ್ಷ ದಶಕದ ಅವಧಿಯಲ್ಲೇ ಅತಿಹೆಚ್ಚು ಮಳೆ ಸುರಿದಿದ್ದು, ರಾಜ್ಯದಾದ್ಯಂತ ಭಾರಿ ಹಾನಿಯುಂಟು ಮಾಡಿದೆ.
ಜೂನ್ – ಸೆಪ್ಟೆಂಬರ್ ಅವಧಿಯಲ್ಲಿ ಸುರಿದ ಧಾರಾಕಾರ ಮಳೆಯಿಂದ ಸೃಷ್ಟಿಯಾದ ಅವಾಂತರಗಳಿಂದಾಗಿ 458 ಮಂದಿ ಮೃತಪಟ್ಟಿದ್ದು, ಸಾವಿರಾರು ಮನೆಗಳು, ಸಾವಿರಾರು ಎಕರೆ ಕೃಷಿಭೂಮಿಗೆ ಹಾನಿಯಾಗಿದೆ.
ಸರ್ಕಾರದ ದಾಖಲೆಗಳ ಪ್ರಕಾರ, 186 ಮಂದಿ ಸಿಡಿಲು ಬಡಿದು ಮೃತಪಟ್ಟಿದ್ದು, 178 ಮಂದಿ ಮಳೆ ಸಂಬಂಧಿತ ಅವಘಡಗಳಲ್ಲಿ ನೀರುಪಾಲಾಗಿದ್ದಾರೆ. ಉಳಿದ ಸಾವುಗಳು ಭೂಕುಸಿತ, ಮನೆಗಳ ಕುಸಿತದ ವೇಳೆ ಸಂಭವಿಸಿವೆ. 467 ಮನೆಗಳು ಸಂಪೂರ್ಣ ನಾಶವಾಗಿವೆ. 8,000ಕ್ಕೂ ಅಧಿಕ ಮನೆಗಳಿಗೆ ಭಾಗಶಃ ಹಾನಿಯಾಗಿದೆ. 2,390 ಹೆಕ್ಟೆರ್‌ನಷ್ಟು ಬೆಳೆ ನಷ್ಟವಾಗಿದೆ. ರಾಂಚಿ, ಗುಲ್ಮಾ, ಲೋಹರ್‌ದಾಗ ಮತ್ತು ಸಿಮ್ದೆಗಾ ಜಿಲ್ಲೆಗಳಲ್ಲಿ ಭಾಗಶಃ ಹಾನಿಯಾಗಿದೆ ಎನ್ನಲಾಗಿದೆ.
ಗಂಗಾ ನದಿ ನೀರಿನ ಮಟ್ಟ ಏರಿದ್ದರಿಂದ ಸಾಹಿಬ್‌ಗಂಜ್‌ನಲ್ಲೇ 20,000 ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿತ್ತು.
'ಜಾರ್ಖಂಡ್‌ನಲ್ಲಿ ಈ ವರ್ಷ ಜೂನ್ 1ರಿಂದ ಸೆಪ್ಟೆಂಬರ್ 30ರ ನಡುವೆ, 119.95 ಸೆಂ.ಮೀ ಮಳೆಯಾಗಿದೆ. ಇದು ಸಾಧಾರಣಕ್ಕಿಂತ ಶೇ 18ರಷ್ಟು ಅಧಿಕವಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಇದು ದಾಖಲೆಯ ಮಳೆಯಾಗಿದೆ. 2016ರಲ್ಲಿ 110 ಸೆಂ.ಮೀ. ಮಳೆ ಸುರಿದಿತ್ತು' ಎಂದು ರಾಂಚಿ ಹವಾಮಾನ ಕೇಂದ್ರದ ನಿರ್ದೇಶಕ ಅಭಿಷೇಕ್ ಆನಂದ್ ತಿಳಿಸಿದ್ದಾರೆ.
ಅಂಕಿ–ಅಂಶ
ಒಟ್ಟು ಸಾವು: 458
ಸಿಡಿಲು ಬಡಿದು ಮೃತಪಟ್ಟವರು: 186 ಮಂದಿ
ಮಳೆ ಸಂಬಂಧಿತ ಅವಘಡಗಳಲ್ಲಿ ನೀರುಪಾಲಾದವರು: 178 ಮಂದಿ
ಭೂಕುಸಿತ, ಮನೆ ಕುಸಿತದ ವೇಳೆ ಮೃತಪಟ್ಟವರು: 94 ಮಂದಿ
ಆಸ್ತಿ ಹಾನಿ
467 ಮನೆಗಳು ಸಂಪೂರ್ಣ ನಾಶ
8,000ಕ್ಕೂ ಹೆಚ್ಚು ಮನೆಗಳು ಭಾಗಶಃ ಹಾನಿ
ಬೆಳೆ ನಷ್ಟ
2,390 ಹೆಕ್ಟೇರ್ ಕೃಷಿ ಭೂಮಿಯ ಬೆಳೆ ನಾಶವಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.