
ರಾಂಚಿ : ಎರಡನೇ ಅವಧಿಗೆ ಜಾರ್ಖಂಡ್ ಮುಖ್ಯಮಂತ್ರಿಯಾಗಿ ಹೇಮಂತ್ ಸೊರೇನ್ ಅವರು ಶುಕ್ರವಾರ ಒಂದು ವರ್ಷ ಪೂರೈಸಿದ್ದಾರೆ. 9,000 ಮಂದಿಗೆ ವಿವಿಧ ಇಲಾಖೆಗಳ ಉದ್ಯೋಗದ ನೇಮಕಾತಿ ಪತ್ರಗಳನ್ನು ವಿತರಿಸುವ ಮೂಲಕ ಅವರು ಸರ್ಕಾರದ ವರ್ಷಾಚರಣೆ ಸಂಭ್ರಮ ಆಚರಿಸಿಕೊಂಡರು.
ಇಲ್ಲಿನ ಮೊರಹಾಬಾದಿ ಮೈದಾನದಲ್ಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸೊರೇನ್, ‘9,000 ಮಂದಿಗೆ ನೇಮಕಾತಿ ಪತ್ರ ವಿತರಿಸಲಾಗಿದೆ. ಈ ಮೂಲಕ ಕಳೆದ ಒಂದು ವರ್ಷದಲ್ಲಿ ವಿವಿಧ ಇಲಾಖೆಗಳಲ್ಲಿ 16,000 ಸರ್ಕಾರಿ ಉದ್ಯೋಗಗಳನ್ನು ಕಲ್ಪಿಸಿದಂತಾಗಿದೆ. ಅಲ್ಲದೇ 8,000 ಮಂದಿಗೆ ಸರ್ಕಾರೇತರ ಉದ್ಯೋಗಗಳನ್ನು ಒದಗಿಸಿದ್ದೇವೆ’ ಎಂದರು.
‘ಜೆಎಂಎಂ ನೇತೃತ್ವದ ಮೊದಲ ಸರ್ಕಾರದ (2020–24) ಅವಧಿಯಲ್ಲಿ 25,000ಕ್ಕೂ ಅಧಿಕ ಮಂದಿಗೆ ಸರ್ಕಾರಿ ಉದ್ಯೋಗ ಲಭಿಸಿತ್ತು. 28,000 ಮಂದಿಗೆ ಖಾಸಗಿ ವಲಯದಲ್ಲಿ ಉದ್ಯೋಗ ಕಲ್ಪಿಸಲಾಗಿತ್ತು’ ಎಂದರು.
‘ವಿರೋಧ ಪಕ್ಷಗಳಿಗೆ ಸರ್ಕಾರದ ಸಾಧನೆ ಬಗ್ಗೆ ಪ್ರಶ್ನೆ ಮಾಡಲು ಆಗುತ್ತಿಲ್ಲ. ಬದಲಿಗೆ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಹೂಡಿ ಅಡ್ಡಿ ಉಂಟುಮಾಡುತ್ತಿವೆ’ ಎಂದು ಅವರು ಆರೋಪಿಸಿದರು.
2024ರ ನವೆಂಬರ್ 28ರಂದು ಸೊರೇನ್ ಪ್ರಮಾಣವಚನ ಸ್ವೀಕರಿಸಿದ್ದರು. ಜೆಎಂಎಂ ನೇತೃತ್ವದ ಮೈತ್ರಿಕೂಟಕ್ಕೆ ವಿಧಾನಸಭೆಯ 81 ಸ್ಥಾನಗಳ ಪೈಕಿ 56 ಸ್ಥಾನಗಳು ಲಭಿಸಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.