ADVERTISEMENT

ಶಾಸಕರಿಂದ ಹಣ ವಶ ಪ್ರಕರಣ: ಶೋಧಕ್ಕೆ ತೆರಳಿದ ಸಿಐಡಿ ಅಧಿಕಾರಿಗಳಿಗೆ ಪೊಲೀಸರ ಅಡ್ಡಿ

ಪಶ್ಚಿಮ ಬಂಗಾಳದ ಸಿಐಡಿ ಅಧಿಕಾರಿಗಳನ್ನು ಬಂಧಿಸಿದ ದೆಹಲಿ, ಗುವಾಹಟಿ ಪೊಲೀಸರು

ಪಿಟಿಐ
Published 4 ಆಗಸ್ಟ್ 2022, 4:05 IST
Last Updated 4 ಆಗಸ್ಟ್ 2022, 4:05 IST
ಜಾರ್ಖಂಡರ್‌ ಕಾಂಗ್ರೆಸ್‌ ಶಾಸಕರಿದ್ದ ಕಾರನ್ನು ಪರಿಶೀಲಿಸುತ್ತಿರುವ ಹೌರಾ ಪೊಲೀಸರು.
ಜಾರ್ಖಂಡರ್‌ ಕಾಂಗ್ರೆಸ್‌ ಶಾಸಕರಿದ್ದ ಕಾರನ್ನು ಪರಿಶೀಲಿಸುತ್ತಿರುವ ಹೌರಾ ಪೊಲೀಸರು.    

ಕೋಲ್ಕತ್ತ: ಜಾರ್ಖಂಡ್‌ನ ಮೂವರು ಶಾಸಕರಿಂದ ನಗದು ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ನವದೆಹಲಿ ಮತ್ತು ಗುವಾಹಟಿಯಲ್ಲಿ ಶೋಧ ಕಾರ್ಯಕ್ಕೆ ತೆರಳಿದ್ದ ನಮ್ಮ ಅಧಿಕಾರಿಗಳನ್ನು ಸ್ಥಳೀಯ ಪೊಲೀಸರು ನಿರ್ಬಂಧಿಸಿದ್ದಾರೆ ಎಂದು ಪಶ್ಚಿಮ ಬಂಗಾಳದ ಅಪರಾಧ ತನಿಖಾ ಇಲಾಖೆ (ಸಿಐಡಿ) ಹೇಳಿದೆ.

ಬಂಧಿತ ಮೂವರು ಶಾಸಕರ ಆಪ್ತರಾಗಿರುವ, ಆರೋಪಿಯೊಬ್ಬರಿಗೆ ಸೇರಿದ ಆಸ್ತಿಯ ಮೇಲೆ ದಾಳಿ ನಡೆಸುತ್ತಿದ್ದಾಗ ದೆಹಲಿ ಪೊಲೀಸರು ನಮ್ಮ ಅಧಿಕಾರಿಗಳನ್ನು ಬಂಧಿಸಿದ್ದಾರೆ. ನ್ಯಾಯಾಲಯದ ವಾರೆಂಟ್ ಹೊರತಾಗಿಯೂ ನವದೆಹಲಿಯ ಸೌತ್ ಕ್ಯಾಂಪಸ್ ಪೊಲೀಸ್ ಠಾಣೆ ವ್ಯಾಪ್ತಿಯ ಆರೋಪಿಯ ನಿವಾಸದಲ್ಲಿ ಶೋಧ ನಡೆಸದಂತೆ ನಿರ್ಬಂಧಿಸಲಾಗಿದೆ ಎಂದು ಹಿರಿಯ ಸಿಐಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ದೆಹಲಿಯ ಪೊಲೀಸ್‌ ಇಲಾಖೆಯು ಕೇಂದ್ರ ಸರ್ಕಾರದ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತದೆ.

ADVERTISEMENT

ಅಸ್ಸಾಂನ ಗುವಾಹಟಿಯಲ್ಲೂ ಸಿಐಡಿ ಅಧಿಕಾರಿಗಳ ಬಂಧನವಾಗಿದೆ. ಕಾಂಗ್ರೆಸ್‌ನ ಮೂವರು ಶಾಸಕರು ಜುಲೈ 29 ರಂದು ಗುವಾಹಟಿ ತಲುಪಿ, ಮರುದಿನ ಅಲ್ಲಿಂದ ಮರಳುವ ದೃಶ್ಯಗಳಿಗಾಗಿ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಲು ಗುವಾಹಟಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಸಿಐಡಿ ಅಧಿಕಾರಿಗಳ ತಂಡವನ್ನು ಬಂಧಿಸಲಾಗಿದೆ. ಸಮಸ್ಯೆ ಬಗೆಹರಿಸಲು ಅಲ್ಲಿನ ಅಧಿಕಾರಿಗಳೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಅಸ್ಸಾಂನಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದೆ.

ಜಾರ್ಖಂಡ್‌ನ ಮೂವರು ಕಾಂಗ್ರೆಸ್ ಶಾಸಕರಾದ ಇರ್ಫಾನ್ ಅನ್ಸಾರಿ, ರಾಜೇಶ್ ಕಚ್ಚಪ್ ಮತ್ತು ನಮನ್ ಬಿಕ್ಸಲ್ ಕೊಂಗಾರಿ ಅವರನ್ನು, ಭಾರಿ ಪ್ರಮಾಣದ ಹಣ ಸಾಗಿಸುತ್ತಿದ್ದ ಆರೋಪದ ಮೇಲೆ ಪಶ್ಚಿಮ ಬಂಗಾಳ ಪೊಲೀಸರು ಇತ್ತೀಚೆಗೆ ಬಂಧಿಸಿದ್ದರು. ಅವರು ಪ್ರಯಾಣಿಸುತ್ತಿದ್ದ ಕಾರಿನಲ್ಲಿ ₹49 ಲಕ್ಷಕ್ಕೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿತ್ತು.

‘ಬಂಧಿತ ಶಾಸಕರೊಬ್ಬರೊಂದಿಗೆ ನಿಕಟ ಸಂಬಂಧ ಹೊಂದಿರುವ ಆರೋಪಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ನಡೆಸಲು ಬುಧವಾರ ಬೆಳಿಗ್ಗೆ ಪಶ್ಚಿಮ ಬಂಗಾಳದ ಸಿಐಡಿ ಅಧಿಕಾರಿಗಳ ತಂಡವು ದೆಹಲಿಗೆ ತೆರಳಿತ್ತು. ನ್ಯಾಯಾಲಯದ ವಾರಂಟ್‌ ಇದ್ದರೂ, ಶೋಧ ಕಾರ್ಯಾಚರಣೆ ನಡೆಸದಂತೆ ಅಲ್ಲಿನ ಪೊಲೀಸರು ನಿರ್ಬಂಧಿಸಿದ್ದಾರೆ’ ಎಂದು ಸಿಐಡಿ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

‘ಶೋಧ ಕಾರ್ಯಾಚರಣೆಯಲ್ಲಿ ಕಾನೂನಿನ ಕೆಲವು ನ್ಯೂನತೆಗಳು ಪತ್ತೆಯಾಗುವವರೆಗೆ ಪಶ್ಚಿಮ ಬಂಗಾಳದ ಸಿಐಡಿ ತಂಡಕ್ಕೆ ನಾವು ಸಕಲ ಸಹಕಾರ ನೀಡಿದ್ದೇವೆ‘ ಎಂದು ದೆಹಲಿ ಪೊಲೀಸರು ಹೇಳಿಕೆ ಬಿಡುಗಡೆ ಮಾಡಿದ್ದಾರೆ.

ಸಮಸ್ಯೆ ಇತ್ಯರ್ಥಪಡಿಸಲು ಪಶ್ಚಿಮ ಬಂಗಾಳ ಸರ್ಕಾರವು ಒಬ್ಬ ಎಡಿಜಿ ಮತ್ತು ಇಬ್ಬರು ಐಜಿ ಶ್ರೇಣಿಯ ಅಧಿಕಾರಿಗಳನ್ನು ದೆಹಲಿಗೆ ಕಳುಹಿಸಿದೆ ಎಂದು ರಾಜ್ಯ ಗೃಹ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಈ ಪ್ರಕರಣವು, ಜಾರ್ಖಂಡ್‌ನ 3 ಶಾಸಕರಿಂದ ಭಾರಿ ಹಣವನ್ನು ವಶಪಡಿಸಿಕೊಂಡಿದ್ದಕ್ಕೆ ಸಂಬಂಧಿಸಿದ್ದಾಗಿದೆ. ನಮ್ಮ ಸಿಐಡಿ ತಂಡವನ್ನು ಬಂಧಿಸುವುದು ಮತ್ತು ತಡೆಯುವುದು ನಿರ್ಣಾಯಕ ಸಾಕ್ಷ್ಯಗಳನ್ನು ನಾಶ ಮಾಡಿದಂತೆ ಆಗಲಿದೆ. ಅದರ ಹೊಣೆಗಾರಿಕೆಯು ದೆಹಲಿ ಪೊಲೀಸರದ್ದೇ ಆಗಲಿದೆ‘ ಎಂದು ಪಶ್ಚಿಮ ಬಂಗಾಳ ಸಿಐಡಿ ಟ್ವೀಟ್ ಕೂಡ ಮಾಡಿದೆ. ‌

‘ರಾಷ್ಟ್ರ ರಾಜಧಾನಿಯಲ್ಲಿ ನಡೆದ ಪೊಲೀಸರ ಈ ನಿರ್ಬಂಧ ಕಾನೂನುಬಾಹಿರ’ ಎಂದು ಸಿಐಡಿ ಅಧಿಕಾರಿ ಪ್ರತಿಪಾದಿಸಿದ್ದಾರೆ.

ಮೂವರು ಶಾಸಕರಿಗೆ ಹಣ ಸರಬರಾಜು ಮಾಡಿದ ಆರೋಪದ ಮೇಲೆ ಉದ್ಯಮಿ ಮಹೇಂದ್ರ ಅಗರ್ವಾಲ್ ಎಂಬುವವರನ್ನು ಬುಧವಾರ ಪಶ್ಚಿಮ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಹವಾಲಾ ಮೂಲಕ ಶಾಸಕರಿಗೆ ಈ ಹಣ ತಲುಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.