ADVERTISEMENT

ಜಮ್ಮು ಮತ್ತು ಕಾಶ್ಮೀರ ಮೇಲ್ಮನೆ ರದ್ದು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2019, 18:38 IST
Last Updated 17 ಅಕ್ಟೋಬರ್ 2019, 18:38 IST

ಜಮ್ಮು:ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶವಾಗಿ ವಿಭಜಿಸಿದ ಹಿಂದೆಯೇ, ರಾಜ್ಯದಲ್ಲಿ 62 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ವಿಧಾನ ಪರಿಷತ್‌ ಅಸ್ತಿತ್ವವೂ ಅಂತ್ಯಗೊಂಡಿದೆ. ಮೇಲ್ಮನೆಯನ್ನು ರದ್ದುಪಡಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ಮೇಲ್ಮನೆಯ 116 ಮಂದಿ ಸಿಬ್ಬಂದಿಗೆ ಸಾಮಾನ್ಯ ಆಡಳಿತ ವಿಭಾಗಕ್ಕೆ ವರದಿ ಮಾಡಿಕೊಳ್ಳಲು ಸೂಚಿಸಲಾಗಿದೆ. ಲಡಾಖ್‌ ಹಾಗೂ ಜಮ್ಮು ಮತ್ತು ಕಾಶ್ಮೀರ ಎಂದು ಕೇಂದ್ರಾಡಳಿತ ಪ್ರದೇಶವಾಗಿ ಘೋಷಿಸಲಾದ ಅಧಿಕೃತ ಆದೇಶ ಅಕ್ಟೋಬರ್‌ 31ರಿಂದ ಜಾರಿಗೆ ಬರಲಿದೆ. ಅದಕ್ಕೆ ಮುನ್ನ ಮೇಲ್ಮನೆ ರದ್ದು ಆದೇಶ ಹೊರಬಿದ್ದಿದೆ.

ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಯನ್ನು ಹೊಂದಿರುವ ಕೇಂದ್ರಾಡಳಿತ ಪ್ರದೇಶವಾಗಿ ರೂಪುತಳೆಯಲಿದೆ. ಆದೇಶದ ಅನುಸಾರ, ಎಲ್ಲ 116 ಸಿಬ್ಬಂದಿ ಇದೇ ಅಕ್ಟೋಬರ್‌ 22ರ ಒಳಗೆ ರಾಜ್ಯದ ಸಾಮಾನ್ಯ ಆಡಳಿತ ವಿಭಾಗಕ್ಕೆ ವರದಿ ಮಾಡಿಕೊಳ್ಳಬೇಕಿದೆ.

ADVERTISEMENT

ರಾಜ್ಯ ಸರ್ಕಾರದ ಕಾಋ್ಯದರ್ಶಿ ಫಾರೂಕ್‌ ಅಹ್ಮದ್‌ ಲೊನೆ ಆದೇಶ ಹೊರಡಿಸಿದ್ದು ಮೇಲ್ಮನೆಗೆ ಸಂಬಂಧಿಸಿದ ಎಲ್ಲ ವಾಹನಗಳು ಹಾಗೂ ಪೀಠೋಪಕರಣಗಳು ಹಾಗೂ ದಾಖಲೆಗಳನ್ನು ಸಂಬಂಧಿಸಿದ ಆಯಾ ಇಲಾಖೆಗಳ ಸುಪರ್ದಿಗೆ ಒಪ್ಪಿಸುವಂತೆ ಸೂಚಿಸಿದೆ.

ಸಂಸತ್ತು ಅಂಗೀಕರಿಸಿದ ಕಾಯ್ದೆಯನ್ವಯ 36 ಸದಸ್ಯ ಬಲದ ವಿಧಾನಪರಿಷತ್ತು 1957ರಲ್ಲಿ ಅಸ್ತಿತ್ವಕ್ಕೆ ಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.