ADVERTISEMENT

ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ಬಳಿಕ ತಾನೇ ಗುಂಡುಹಾರಿಸಿಕೊಂಡ ಯೋಧ

ಪಿಟಿಐ
Published 17 ಜುಲೈ 2022, 2:15 IST
Last Updated 17 ಜುಲೈ 2022, 2:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಇಂಡೊ–ಟಿಬೆಟ್‌ ಗಡಿ ಪೊಲೀಸ್‌ನ (ಐಟಿಬಿಪಿ) ಕಾನ್‌ಸ್ಟೆಬಲ್‌ ಒಬ್ಬರು ತಮ್ಮ ಮೂವರು ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ಬಳಿಕ ತಾವೇ ಗುಂಡು ಹಾರಿಸಿಕೊಂಡು ಮೃತಪಟ್ಟ ಘಟನೆ ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಸೇನಾನೆಲೆಯಲ್ಲಿ ಶನಿವಾರ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಿಲ್ಲೆಯ ದೇವಿಕಾ ಘಾಟ್‌ ಸಮುದಾಯ ಕೇಂದ್ರದಲ್ಲಿ ಮಧ್ಯಾಹ್ನ 3.30ಕ್ಕೆ ಈ ಘಟನೆ ನಡೆದಿದೆ.ಕಾನ್‌ಸ್ಟೆಬಲ್‌ ಭೂಪೇಂದ್ರ ಸಿಂಗ್‌ ಅವರು ಈ ಕೃತ್ಯ ಎಸಗಿದ್ದಾರೆ. ಗುಂಡೇಟು ತಿಂದ ಮುಖ್ಯ ಕಾನ್‌ಸ್ಟೆಬಲ್‌ ಮತ್ತು ಇತರ ಇಬ್ಬರು ಕಾನ್‌ಸ್ಟೆಬಲ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಭೂಪೇಂದ್ರ ಅವರುತಮ್ಮ ಐಎನ್‌ಎಸ್‌ಎಎಸ್‌ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಘಟನೆಗೂ ಮೊದಲು ಕಾನ್‌ಸ್ಟೆಬಲ್‌ಗಳ ಮಧ್ಯೆ ಮಾತಿನ ಚಕಮಕಿ ನಡೆದಿತ್ತು ಎಂದು ಕೆಲವರು ಮಾಹಿತಿ ನೀಡಿದ್ದಾರೆ. ಆದರೆ, ಈ ಘಟನೆಗೆ ನಿರ್ದಿಷ್ಟ ಕಾರಣ ತಿಳಿದುಬಂದಿಲ್ಲ.ಈ ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

ಯೋಧರೊಬ್ಬರು ತಮ್ಮಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ, ಬಳಿಕ ತಾವೂ ಗುಂಡು ಹಾರಿಸಿಕೊಂಡು ಮೃತಪಟ್ಟಿದ್ದ ಘಟನೆ ಶುಕ್ರವಾರವಷ್ಟೇ ಜಮ್ಮು ಮತ್ತು ಕಾಶ್ಮೀರದ ಪೂಂಛ್‌ ಜಿಲ್ಲೆಯಲ್ಲಿ ನಡೆದಿತ್ತು. ಗುಂಡೇಟಿಗೆ ಒಳಗಾದ ಯೋಧರಲ್ಲಿ ಒಬ್ಬರು ಮೃತಪಟ್ಟು, ಇನ್ನಿಬ್ಬರು ಗಾಯಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.