ADVERTISEMENT

ಜಾರ್ಖಂಡ್ | ಅಂಗಿ ತೆಗೆಯಲು ಬಾಲಕಿಯರಿಗೆ ಪ್ರಾಂಶುಪಾಲ ಸೂಚನೆ ಆರೋಪ: ತನಿಖೆಗೆ ಆದೇಶ

ಅಂಗಿ ಮೇಲೆ ಸಂದೇಶಗಳನ್ನು ಬರೆದಿದ್ದಾರೆ ಎನ್ನಲಾದ ಪ್ರಕರಣ

ಪಿಟಿಐ
Published 11 ಜನವರಿ 2025, 16:11 IST
Last Updated 11 ಜನವರಿ 2025, 16:11 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಧನಬಾದ್(ಜಾರ್ಖಂಡ್): ಧನಬಾದ್‌ ಜಿಲ್ಲೆಯ ಖಾಸಗಿ ಶಾಲೆಯೊಂದರ 10ನೇ ತರಗತಿ ವಿದ್ಯಾರ್ಥಿನಿಯರು ಪರಸ್ಪರರ ಅಂಗಿಗಳ ಮೇಲೆ ಸಂದೇಶಗಳನ್ನು ಬರೆದಿದ್ದಕ್ಕಾಗಿ, ಅಂಗಿ ತೆಗೆಯುವಂತೆ ಪ್ರಾಂಶುಪಾಲ ಸೂಚಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ.

ಈ ಕುರಿತು ವಿದ್ಯಾರ್ಥಿನಿಯರ ಪಾಲಕರು ದೂರು ನೀಡಿದ್ದು, ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ಆದೇಶಿಸಿದ್ದಾರೆ.

ADVERTISEMENT

ಜಿಲ್ಲೆಯ ಜೋರಾಪೋಖರ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಡಿಗ್ವಾಡಿಹದಲ್ಲಿರುವ ಪ್ರತಿಷ್ಠಿತ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

‘ಶುಕ್ರವಾರ ಪರೀಕ್ಷೆ ಮುಗಿದ ನಂತರ ವಿದ್ಯಾರ್ಥಿನಿಯರು ‘ಪೆನ್‌ ಡೇ’ ಹಮ್ಮಿಕೊಂಡಿದ್ದರು. ಇದರ ಭಾಗವಾಗಿ ಪರಸ್ಪರರ ಅಂಗಿಗಳ ಮೇಲೆ ಸಂದೇಶಗಳನ್ನು ಬರೆದಿದ್ದರು’ ಎಂದು ಪಾಲಕರು ದೂರಿನಲ್ಲಿ ತಿಳಿಸಿದ್ದಾರೆ.

‘ವಿದ್ಯಾರ್ಥಿನಿಯರ ಈ ನಡೆಗೆ ಪ್ರಾಂಶುಪಾಲರು ಆಕ್ಷೇಪ ವ್ಯಕ್ತಪಡಿಸಿದ್ದರಲ್ಲದೇ, ಅಂಗಿಗಳನ್ನು ತೆಗೆಯುವಂತೆ ಸೂಚಿಸಿದ್ದರು. ವಿದ್ಯಾರ್ಥಿನಿಯರು ಕ್ಷಮೆ ಯಾಚಿಸಿದರೂ, ಅವರು ಸ್ಪಂದಿಸಲಿಲ್ಲ. ನಂತರ, ವಿದ್ಯಾರ್ಥಿನಿಯರು ಅಂಗಿ ತೆಗೆದು, ಬ್ಲೇಜರ್‌ಗಳನ್ನು ಮಾತ್ರ ಧರಿಸಿ ಮನೆಗೆ ಮರಳಿದ್ದಾರೆ’ ಎಂದು ಪಾಲಕರು ಜಿಲ್ಲಾಧಿಕಾರಿಗೆ ವಿವರಿಸಿದ್ದಾರೆ.

‘ಕೆಲ ಪಾಲಕರು ಪ್ರಾಂಶುಪಾಲ ವಿರುದ್ಧ ದೂರು ದಾಖಲಿಸಿದ್ದಾರೆ. ನಾನು ಕೂಡ ಕೆಲವು ವಿದ್ಯಾರ್ಥಿನಿಯರೊಂದಿಗೆ ಮಾತನಾಡಿರುವೆ. ಜಿಲ್ಲಾಡಳಿತ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆಗಾಗಿ ಸಮಿತಿಯೊಂದನ್ನು ರಚಿಸಲಾಗಿದೆ’ ಎಂದು ಮಿಶ್ರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.