ADVERTISEMENT

ಶ್ರೀನಗರ: ‌ಮಾಜಿ ಸಿಎಂ ಫಾರೂಕ್‌ ಅಬ್ದುಲ್ಲಾಗೆ ನಿರ್ಬಂಧ

ಮನೆಯಿಂದ ಹೊರಬರಲು ಅವಕಾಶ ನಿರಾಕರಣೆ; ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2022, 16:55 IST
Last Updated 14 ಫೆಬ್ರುವರಿ 2022, 16:55 IST
 ಸಂಸದ ಫಾರೂಕ್‌ ಅಬ್ದುಲ್ಲಾ
ಸಂಸದ ಫಾರೂಕ್‌ ಅಬ್ದುಲ್ಲಾ    

ಶ್ರೀನಗರ: ಪುಲ್ವಾಮ ದಾಳಿಯ ವರ್ಷಾಚರಣೆಯ ಹಿನ್ನೆಲೆಯಲ್ಲಿ ಭದ್ರತಾ ಕಾರಣದಿಂದ ಸೋಮವಾರ ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಫಾರೂಕ್‌ ಅಬ್ದುಲ್ಲಾ ಅವರಿಗೆ ಮನೆಯಿಂದ ಹೊರಬರದಂತೆ ಇಲ್ಲಿನ ಆಡಳಿತವು ನಿರ್ಬಂಧ ವಿಧಿಸಿತ್ತು.

ಪೊಲೀಸರ ಏಕಾಏಕಿ ನಿರ್ಬಂಧವನ್ನು ಖಂಡಿಸಿ ಫಾರೂಕ್‌ ಅಬ್ದುಲ್ಲಾ ಪ್ರತಿಭಟನೆ ನಡೆಸಿದ್ದು, ಸರ್ಕಾರದ ನಡೆಯನ್ನು ಪಕ್ಷದ ಮುಖಂಡರು ಖಂಡಿಸಿದ್ದಾರೆ.

‘ಫಾರೂಕ್‌ ಅಬ್ದುಲ್ಲಾ ಅವರು ರಸ್ತೆ ಮಾರ್ಗವಾಗಿ ಜಮ್ಮುವಿಗೆ ತೆರಳುವುದು ನಿಗದಿಯಾಗಿತ್ತು. ಐದು ದಿನಗಳ ಹಿಂದೆಯೇ ಈ ಕಾರ್ಯಕ್ರಮದ ಮಾಹಿತಿಯನ್ನು ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ಆದರೆ ಇಂದು ಏಕಾಏಕಿ ಮನೆಯಿಂದ ಹೊರಬರದಂತೆ ನಿರ್ಬಂಧಿಸಿದ್ದು,ನಿರಾಸೆ ಉಂಟು ಮಾಡಿದೆ’ ಎಂದು ನ್ಯಾಷನಲ್‌ ಕಾನ್ಫರೆನ್ಸ್‌ ಪಕ್ಷದ ನಾಯಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ADVERTISEMENT

‘ಮೂರು ಬಾರಿ ಮುಖ್ಯಮಂತ್ರಿ ಹಾಗೂ ಹಾಲಿ ಸಂಸದರಾಗಿರುವ ಫಾರೂಕ್‌ ಅಬ್ದುಲ್ಲಾ ಅವರು ಸೋಮವಾರ ಮಧ್ಯಾಹ್ನ ಮನೆಯಿಂದ ಹೊರ ನಡೆದಿದ್ದರು. ಆದರೆ ಅವರನ್ನು ಮನವೊಲಿಸುವ ಬದಲಾಗಿ ಒತ್ತಾಯದಿಂದ ಭದ್ರತಾ ಪಡೆಗಳು ಪೊಲೀಸ್‌ ವಾಹನದಲ್ಲಿ ಕರೆತಂದು ನಿವಾಸಕ್ಕೆ ಬಿಟ್ಟರು’ ಎಂದು ಎನ್‌ಸಿ ಮೂಲಗಳು ತಿಳಿಸಿವೆ.

’ಪುಲ್ವಾಮಾ ದಾಳಿಯ ವಾರ್ಷಿಕೋತ್ಸವದ ದಿನವಾದ ಸೋಮವಾರ ಭದ್ರತಾ ದೃಷ್ಟಿಯಿಂದ ಯಾವುದೇ ಗಣ್ಯ ವ್ಯಕ್ತಿಗಳ ಸಂಚಾರಕ್ಕೆ ಅವಕಾಶ ಇರಲಿಲ್ಲ. ಹಾಗಾಗಿ ಅವರನ್ನು ನಿರ್ಬಂಧಿಸಲಾಯಿತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.