ADVERTISEMENT

ಜೆಎನ್‌ಯು ಕ್ಯಾಂಪಸ್‌ನಲ್ಲಿ ಘರ್ಷಣೆ | ಅಶಿಸ್ತಿನ ವರ್ತನೆ ಹತ್ತಿಕ್ಕಲು ಕ್ರಮ:ವಿ.ವಿ

ಪಿಟಿಐ
Published 23 ಫೆಬ್ರುವರಿ 2026, 15:40 IST
Last Updated 23 ಫೆಬ್ರುವರಿ 2026, 15:40 IST
<div class="paragraphs"><p>ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಆವರಣದಲ್ಲಿ ಭಾನುವಾರ ರಾತ್ರಿ ನಡೆದ ಸಂಘರ್ಷದಲ್ಲಿ ಗಾತಯಗೊಂಡವರ ಕುರಿತು ಮಾಹಿತಿ ನೀಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ವಿಕಾಸ್‌ ಪಟೇಲ್‌</p></div>

ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಆವರಣದಲ್ಲಿ ಭಾನುವಾರ ರಾತ್ರಿ ನಡೆದ ಸಂಘರ್ಷದಲ್ಲಿ ಗಾತಯಗೊಂಡವರ ಕುರಿತು ಮಾಹಿತಿ ನೀಡಿದ ಎಬಿವಿಪಿ ರಾಜ್ಯ ಕಾರ್ಯದರ್ಶಿ ವಿಕಾಸ್‌ ಪಟೇಲ್‌

   

–ಪಿಟಿಐ ಚಿತ್ರ

ನವದೆಹಲಿ: ಇಲ್ಲಿನ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಆವರಣದಲ್ಲಿ ಭಾನುವಾರ ತಡರಾತ್ರಿ ನಡೆದ ಸಂಘರ್ಷದಲ್ಲಿ ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಘಟನೆಯನ್ನು ಗಂಭೀರವಾಗಿ ತೆಗೆದುಕೊಂಡಿರುವ ವಿ.ವಿಯ ಆಡಳಿತ ಮಂಡಳಿ, ಅಶಿಸ್ತು ತೋರುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.

ADVERTISEMENT

ಎಡಪಂಥೀಯ ಸಂಘಟನೆಯ ವಿದ್ಯಾರ್ಥಿಗಳು ಹಿಂಸಾಚಾರದಲ್ಲಿ ತೊಡಗಿ, ಕಲ್ಲು ತೂರಾಟ ನಡೆಸಿದ್ದಾರೆ ಎಂದು  ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನ (ಎಬಿವಿಪಿ) ಸಂಘಟನೆಯ ಮುಖಂಡರು ಆರೋಪಿಸಿದ್ದಾರೆ. 

‘ಆವರಣದಲ್ಲಿ ಶೈಕ್ಷಣಿಕ ಪರಿಸರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಕಠಿಣ ಕ್ರಮವನ್ನು ಕೈಗೊಳ್ಳಲಾಗುವುದು. ಅಶಿಸ್ತಿನ ವರ್ತನೆ ನಡೆಸಿದವರ ವಿರುದ್ಧ ಅಡಿಯಲ್ಲಿ ಕಠಿಣ ಕೈಗೊಳ್ಳಲಾಗುತ್ತದೆ’ ಎಂದು ಜೆಎನ್‌ಯು ಬಿಡುಗಡೆಗೊಳಿಸಿರುವ ಪ್ರಕಟಣೆಯಲ್ಲಿ ತಿಳಿಸಿದೆ. 

‘ಕ್ಯಾಂಪಸ್‌ನ ಒಳಗಿರುವ ಹಲವು ಶೈಕ್ಷಣಿಕ ಕಟ್ಟಡಗಳಿಗೆ ಪ್ರತಿಭಟನೆನಿರತ ವಿದ್ಯಾರ್ಥಿಗಳು ಬೀಗ ಹಾಕಿರುವುದು ಕಂಡುಬಂದಿದೆ. ಪ್ರತಿಭಟನಕಾರರು ಗ್ರಂಥಾಲಯ ಪ್ರವೇಶಿಸಿ, ಪ್ರತಿಭಟನೆಗೆ ಕೈ ಜೋಡಿಸುವಂತೆ ವಿದ್ಯಾರ್ಥಿಗಳಿಗೆ ಬೆದರಿಕೆ ಹಾಕಿದ್ದಾರೆ. ಈ ವೇಳೆ ಎರಡು ಕಡೆಗಳಲ್ಲಿ ಸಂಘರ್ಷ ನಡೆದಿದ್ದು, ಈ ವಿಚಾರವನ್ನು ಜೆಎನ್‌ಯು ಆಡಳಿತ ಮಂಡಳಿಯೂ ಗಂಭೀರವಾಗಿ ಪರಿಗಣಿಸಿದೆ’ ಎಂದು ತಿಳಿಸಿದೆ. 

ಎಲ್ಲಾ ವಿದ್ಯಾರ್ಥಿಗಳು ಶಾಂತಿ ಕಾಪಾಡಬೇಕು ಹಾಗೂ ಆವರಣದಲ್ಲಿ ಹಿಂದೆ ನಿಗದಿಯಾಗಿರುವ ಶೈಕ್ಷಣಿಕ ಚಟುವಟಿಕೆಗಳು ಎಂದಿನಂತೆ ಮುಂದುವರಿಯಲಿದೆ ಎಂದು ತಿಳಿಸಿದೆ.

ಎಬಿವಿಪಿ ಆರೋಪ: ‘ಗ್ರಂಥಾಲಯದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳ ಮೇಲೆ ಎಡಪಂಥೀಯ ಸಂಘಟನೆಯ ವಿದ್ಯಾರ್ಥಿಗಳು ಹಲ್ಲೆ ನಡೆಸಿದ್ದರಿಂದ ಹಿಂಸಾಚಾರ ಸಂಭವಿಸಿತ್ತು’ ಎಂದು ಎಬಿವಿಪಿ ಆರೋಪಿಸಿದೆ.

‘ಹಲವು ವಿದ್ಯಾರ್ಥಿಗಳನ್ನು ಬಾತ್‌ರೂಂನಲ್ಲೇ ಲಾಕ್‌ ಮಾಡಲಾಗಿತ್ತು. ಅಲ್ಲದೇ, ಗ್ರಂಥಾಲಯವನ್ನೇ ಬಂದ್‌ ಮಾಡುವಂತೆ ಒತ್ತಾಯಿಸುತ್ತಿದ್ದರು’ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ವಿಕಾಸ್‌ ಪಟೇಲ್‌ ದೂರಿದ್ದಾರೆ.

‘ಆವರಣದಲ್ಲಿ ಹಿಂಸಾಚಾರ ಪ್ರಚೋದಿಸಲು ಕೆಲವರು ಬಡಿಗೆ, ಕಲ್ಲುಗಳನ್ನು ತಂದಿದ್ದರು’ ಎಂದು ಆರೋಪಿಸಿದ್ದಾರೆ.

ಪ್ರತಿಭಟನೆ ಏಕೆ?

ವಿಶ್ವವಿದ್ಯಾಲಯದ ಉಪಕರಣಗಳನ್ನು ಹಾನಿಗೊಳಿಸಿದ ಆರೋಪದ ಮೇಲೆ ಕೆಲವು ವಿದ್ಯಾರ್ಥಿಗಳನ್ನು ವಿ.ವಿಯಿಂದ ಹೊರಹಾಕಲಾಗಿತ್ತು. ಅವರ ಮೇಲಿನ ಶಿಸ್ತುಕ್ರಮವನ್ನು ಹಿಂದಕ್ಕೆ ಪಡೆಯಬೇಕೆಂದು ಹಾಗೂ ಜೆಎನ್‌ಯು ವಿಶ್ವವಿದ್ಯಾಲಯದ ಕುಲಪತಿ ಡಾ. ಶಾಂತಿಶ್ರೀ ಪಂಡಿತ್‌ ರಾಜೀನಾಮೆಗೆ ಒತ್ತಾಯಿಸಿ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ‘ಸಮತಾ ಜೂಲೂಸ್‌’ ಹೆಸರಿನಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದ್ದವು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.