ADVERTISEMENT

ಪರೀಕ್ಷೆ ಕಡ್ಡಾಯ: ಹೊಸ ನಿಯಮಕ್ಕೆ ಜೆಎನ್‌ಯು ವಿದ್ಯಾರ್ಥಿ ಒಕ್ಕೂಟ ವಿರೋಧ

ಕಲಿಕಾರ್ಥಿಗಳ ಹಿತ ಕಾಯಲು ಹೊಸ ನಿಯಮ: ಆಡಳಿತ ಮಂಡಳಿ

ಏಜೆನ್ಸೀಸ್
Published 18 ಡಿಸೆಂಬರ್ 2019, 13:08 IST
Last Updated 18 ಡಿಸೆಂಬರ್ 2019, 13:08 IST
ಜವಾಹರಲಾಲ್ ನೆಹರೂ ವಿವಿ (ಪ್ರಾತಿನಿಧಿಕ ಚಿತ್ರ)
ಜವಾಹರಲಾಲ್ ನೆಹರೂ ವಿವಿ (ಪ್ರಾತಿನಿಧಿಕ ಚಿತ್ರ)   

ನವದೆಹಲಿ: ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (ಜೆಎನ್‌ಯು) ಪರೀಕ್ಷಾ ಪದ್ಧತಿಯನ್ನು ಬದಲಾಯಿಸಿರುವ ಕ್ರಮಕ್ಕೆ ಜೆಎನ್‌ಯು ವಿದ್ಯಾರ್ಥಿಗಳ ಒಕ್ಕೂಟ ಬಲವಾಗಿ ವಿರೋಧಿಸಿದೆ.

ಜೆಎನ್‌ಯು ಆಡಳಿತವು ಇತ್ತೀಚೆಗೆ ಸುತ್ತೋಲೆಯೊಂದನ್ನು ಹೊರಡಿಸಿದ್ದು, ಅದರಲ್ಲಿ ಪರೀಕ್ಷೆಗೆ ಹಾಜರಾಗುವುದು ಕಡ್ಡಾಯ ಎಂದು ಉಲ್ಲೇಖಿಸಿದೆ. ಸುತ್ತೋಲೆಯಲ್ಲಿ "ವಿಶ್ವವಿದ್ಯಾಲಯವು ಪರೀಕ್ಷೆಗಳನ್ನು ನಡೆಸಲು ಸಕಲ ರೀತಿಯಲ್ಲೂ ಪ್ರಯತ್ನಗಳನ್ನು ನಡೆಸುತ್ತಿದೆ. ಆದರೂ, ಕೆಲವರು ತಾವಾಗಿಯೇ ಪರೀಕ್ಷೆಗಳನ್ನು ಬರೆಯಲು ನಿರಾಕರಿಸುತ್ತಿದ್ದಾರೆ. ವಿಶ್ವವಿದ್ಯಾಲಯದ ನಿಯಮಾವಳಿಗಳ ಪ್ರಕಾರ, ಶೈಕ್ಷಣಿಕ ಅಗತ್ಯಗಳನ್ನು ಪೂರೈಸದ ಅಂಥವರು ಮುಂದಿನ ಸೆಮಿಸ್ಟರ್‌ಗೆ ನೋಂದಾಯಿಸಿಕೊಳ್ಳಲು ಅರ್ಹತೆ ಗಳಿಸುವುದಿಲ್ಲ" ಎಂದು ವಿವರಿಸಲಾಗಿದೆ.

ಪ್ರತಿಭಟನೆಗಳಿಂದಾಗಿ ದೇಶದ ಗಮನ ಸೆಳೆದಿರುವ ಜೆಎನ್‌ಯುನಲ್ಲಿ, ವಿದ್ಯಾರ್ಥಿಗಳು ಅಂತಿಮ ಸೆಮಿಸ್ಟರ್ ಪರೀಕ್ಷೆಗಳನ್ನು ಬರೆಯದಂತೆ ಕೆಲವು ಪ್ರತಿಭಟನಾಕಾರ ವಿದ್ಯಾರ್ಥಿಗಳು ತಡೆಯುತ್ತಿದ್ದಾರೆ ಎಂದು ಜೆಎನ್‌ಯು ಆಡಳಿತ ಮಂಡಳಿಯು ಹೇಳಿದೆ. ಅರ್ಹ ವಿದ್ಯಾರ್ಥಿಗಳ ಭವಿಷ್ಯವನ್ನು ಪರಿಗಣಿಸಿ ಈ ಹೊಸ ನಿಯಮ ರೂಪಿಸಲಾಗಿದೆ ಎಂದು ಜೆಎನ್‌ಯು ಆಡಳಿತ ಮಂಡಳಿಯು ತಿಳಿಸಿದೆ.

ADVERTISEMENT

ಆದರೆ, ವಿದ್ಯಾರ್ಥಿ ಒಕ್ಕೂಟವು ಇದನ್ನು ವಿರೋಧಿಸಿದ್ದು, "ಆಡಳಿತ ಮಂಡಳಿಯು ಜೆಎನ್‌ಯುವನ್ನು ವಾಟ್ಸ್ಆ್ಯಪ್ ವಿಶ್ವವಿದ್ಯಾಲಯವಾಗಿ ಪರಿವರ್ತಿಸುತ್ತಿದೆ" ಎಂದು ಆರೋಪಿಸಿದೆಯಲ್ಲದೆ, ಈ ಸುತ್ತೋಲೆಯನ್ನು ವಿರೋಧಿಸಿ ಶೈಕ್ಷಣಿಕ ಬಹಿಷ್ಕಾರಕ್ಕೆ ಕರೆ ನೀಡಿದೆ.

ಇತ್ತೀಚೆಗೆ ಶುಲ್ಕ ಏರಿಕೆ ವಿರುದ್ಧ ಒಕ್ಕೂಟವು ತೀವ್ರವಾಗಿ ಪ್ರತಿಭಟಿಸಿತ್ತು. ಇದೀಗ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಹೋರಾಟ ನಡೆಸುತ್ತಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಆಲಿಘರ್ ಮುಸ್ಲಿಂ ಯೂನಿವರ್ಸಿಟಿಯನ್ನು ಬೆಂಬಲಿಸುವುದಾಗಿಯೂ ಒಕ್ಕೂಟ ಘೋಷಿಸಿದೆ. ಸಂಸತ್ ದಾಳಿಯ ರೂವಾರಿ, ಉಗ್ರಗಾಮಿ ಅಫ್ಜಲ್ ಗುರು ಬೆಂಬಲಿಸಿ ಜೆಎನ್‌ಯುವಿನಲ್ಲಿ ಪ್ರತಿಭಟನೆ ನಡೆದಂದಿನಿಂದ ಈ ವಿಶ್ವವಿದ್ಯಾಲಯವು ಜಗತ್ತಿನ ಗಮನ ಸೆಳೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.