ADVERTISEMENT

ಸುದ್ದಿ ವೈಭವೀಕರಣ ಬೇಡ: ಅಲಹಾಬಾದ್‌ ಹೈಕೋರ್ಟ್‌

ಪಿಟಿಐ
Published 1 ಜುಲೈ 2021, 18:53 IST
Last Updated 1 ಜುಲೈ 2021, 18:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಲಖನೌ: ‘ಪತ್ರಕರ್ತರು ಸೂಕ್ಷ್ಮವಾದ ಘಟನೆಗಳನ್ನು ನಾಟಕೀಯವಾಗಿ ಬಿಂಬಿಸಿ, ಸುದ್ದಿಯನ್ನು ಸೃಷ್ಟಿಸಲು ಒತ್ತು ನೀಡಬಾರದು’ ಎಂದು ಅಲಹಾಬಾದ್‌ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಗೆ ನೆರವು ನೀಡಿದ ಆರೋಪದಡಿ ಬಂಧಿಸಲಾಗಿರುವ ಪತ್ರಕರ್ತರೊಬ್ಬರ ಜಾಮೀನು ಅರ್ಜಿಯನ್ನು ಕೋರ್ಟ್‌ ಇದೇ ಸಂದರ್ಭದಲ್ಲಿ ತಳ್ಳಿಹಾಕಿತು.

ಉತ್ತರ ಪ್ರದೇಶದ ಸಚಿವಾಲಯ ಕಟ್ಟಡದ ಹೊರಗಡೆ ಕಳೆದ ವರ್ಷ ನಡೆದಿದ್ದ ವ್ಯಕ್ತಿಯೊಬ್ಬರ ಆತ್ಮಹತ್ಯೆಗೆ ಯತ್ನಕ್ಕೆ ನೆರವು ಹಾಗೂ ಅದನ್ನು ಚಿತ್ರೀಕರಿಸಿದ ಪ್ರಕರಣದ ಸಹ ಆರೋಪಿ ಪತ್ರಕರ್ತ ಶಮಿಮ್‌ ಅಹ್ಮದ್‌ ಅವರ ಜಾಮೀನು ಅರ್ಜಿಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ವಿಕಾಸ್‌ ಕುನ್ವರ್‌ ಶ್ರೀವಾತ್ಸವ್‌ ಅವರು ಈ ಮಾತು ಹೇಳಿದರು.

ಈ ಕುರಿತ ಆದೇಶದಲ್ಲಿ ನ್ಯಾಯಮೂರ್ತಿಗಳು, ಪತ್ರಕರ್ತರು ಯಾವುದೇ ಘಟನೆಯನ್ನು ನಾಟಕೀಯಗೊಳಿಸುವ ಅಥವಾ ಭಯಾನಕವಾಗಿ ಬಿಂಬಿಸುವ ಮೂಲಕ ಸುದ್ದಿಯನ್ನು ಸೃಷ್ಟಿಸಬಾರದು. ಈ ಮೂಲಕ ಆತ್ಮಹತ್ಯೆಗೆ ಮುಂದಾಗುವವರ ಜೀವವನ್ನು ಅಪಾಯಕ್ಕೆ ದೂಡಬಾರದು ಎಂದು ಅಭಿಪ್ರಾಯಪಟ್ಟರು.

ADVERTISEMENT

ತನ್ನನ್ನು ಮನೆಯಿಂದ ಎತ್ತಂಗಡಿ ಮಾಡಲಾಗುತ್ತದೆ ಎಂದು ಭೀತಿಗೊಂಡಿದ್ದ ವ್ಯಕ್ತಿಯೊಬ್ಬರು ಸಚಿವಾಲಯದ ಕಚೇರಿ ಎದುರು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದರು. ಪತ್ರಕರ್ತ ಶಮೀಮ್‌ ಮತ್ತು ಸಹ ಆರೋಪಿ ನೌಶಾದ್ ಅಹ್ಮದ್‌ ವ್ಯಕ್ತಿಯ ರಕ್ಷಣೆಗೆ ಮುಂದಾಗದೇ, ಆತ್ಮಹತ್ಯೆ ಯತ್ನದ ಕೃತ್ಯವನ್ನು ಚಿತ್ರೀಕರಿಸಿದ್ದರು ಎಂದುಹೇಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.