ADVERTISEMENT

ಚುನಾವಣೆ ಬಗ್ಗೆ ಚಿಂತೆ ಬೇಡ, ಬಿಜೆಪಿ ಸಿದ್ಧಾಂತ ಹೊಂದಿರುವ ಪಕ್ಷ: ಜೆ.ಪಿ. ನಡ್ಡಾ

ಪಿಟಿಐ
Published 20 ಸೆಪ್ಟೆಂಬರ್ 2022, 14:22 IST
Last Updated 20 ಸೆಪ್ಟೆಂಬರ್ 2022, 14:22 IST
ಜೆ.ಪಿ. ನಡ್ಡಾ (ಪಿಟಿಐ ಸಂಗ್ರಹ ಚಿತ್ರ)
ಜೆ.ಪಿ. ನಡ್ಡಾ (ಪಿಟಿಐ ಸಂಗ್ರಹ ಚಿತ್ರ)   

ಅಹಮದಾಬಾದ್: ‘ಮುಂಬರುವ ಚುನಾವಣೆ ಬಗ್ಗೆ ಚಿಂತೆ ಬೇಡ. ನಮ್ಮದು ಸಿದ್ಧಾಂತ ಹೊಂದಿರುವ ಏಕೈಕ ಪಕ್ಷ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಗುಜರಾತ್‌ನ ಮುಖಂಡರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಹೇಳಿದ್ದಾರೆ.

ನಗರ ಮತ್ತು ಪಂಚಾಯತ್ ಸಂಸ್ಥೆಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ರಾಜ್‌ಕೋಟ್‌ನಲ್ಲಿ ಅವರು ಮಂಗಳವಾರ ಮಾತನಾಡಿದರು.

‘ಚಿಂತಿಸಬೇಕಾದ ಅಗತ್ಯವೇ ಇಲ್ಲ. ನಮ್ಮ ದೇಶದಲ್ಲಿ ಸೈದ್ಧಾಂತಿಕ ಹಿನ್ನೆಲೆಯುಳ್ಳ ಏಕೈಕ ಪಕ್ಷ ಬಿಜೆಪಿ. ಸಿದ್ಧಾಂತವನ್ನು ಅನುಸರಿಸುವ ಇನ್ನೊಂದು ಪಕ್ಷ ಇಲ್ಲ. ಚುನಾವಣೆ ಬಂದಾಗಲೆಲ್ಲ ಕೆಲವರು ಹೀಗಾಗಲಿದೆ, ಹಾಗಾಗಲಿದೆ ಎಂದು ಹೇಳುತ್ತಿರುತ್ತಾರೆ. ಅಂಥವರಿಗೆ, ನೀವ್ಯಾಕೆ ಚಿಂತಿಸುತ್ತೀರಿ ಎಂದು ಕೇಳಲು ಬಯಸುತ್ತೇನೆ. 18 ಕೋಟಿ ಕಾರ್ಯಕರ್ತರಿರುವ ಪಕ್ಷಕ್ಕೆ ಸೇರಿದವರು ನೀವು. ನಿಮ್ಮಿಂದಾದ ಅತ್ಯುತ್ತಮ ಪ್ರಯತ್ನ ಮಾಡಿ’ ಎಂದು ನಡ್ಡಾ ಹೇಳಿದ್ದಾರೆ.

ಕಾಂಗ್ರೆಸ್‌ನ ‘ಭಾರತ್ ಜೋಡೋ ಯಾತ್ರೆ’ ಬಗ್ಗೆ ವ್ಯಂಗ್ಯವಾಡಿದ ನಡ್ಡಾ, ಕಾಂಗ್ರೆಸ್‌ನವರು ದೇಶವನ್ನು ಒಗ್ಗೂಡಿಸಲು ಚಿಂತಿಸುವ ಬದಲು ತಮ್ಮೊಳಗಿನ ಹುಳುಕುಗಳನ್ನು ಸರಿ ಮಾಡಿಕೊಳ್ಳಲು ಮುಂದಾಗಲಿ ಎಂದಿದ್ದಾರೆ.

‘ಇಂದು ಕಾಂಗ್ರೆಸ್ ಎಲ್ಲಿದೆ? ಅದು ಭಾರತೀಯವೂ ಅಲ್ಲ, ರಾಷ್ಟ್ರೀಯವೂ ಅಲ್ಲ ಕಾಂಗ್ರೆಸ್ಸೂ ಅಲ್ಲ. ಅದು ಸಹೋದರ, ಸಹೋದರಿಯ (ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಅವರನ್ನು ಉದ್ದೇಶಿಸಿ) ಪಕ್ಷವಷ್ಟೆ. ಅವರು ಭಾರತ್ ಜೋಡೋ ಬದಲಿಗೆ ‘ಕಾಂಗ್ರೆಸ್ ಜೋಡೋ’ ಮಾಡಲಿ. ಯಾಕೆಂದರೆ ಹಿರಿಯ ನಾಯಕರು ಪಕ್ಷ ಬಿಡುತ್ತಿದ್ದಾರೆ’ ಎಂದು ನಡ್ಡಾ ಹೇಳಿದ್ದಾರೆ.

ಬಿಜೆಪಿ ಆಡಳಿತವಿರುವ ಗುಜರಾತ್‌ನಲ್ಲಿ ಡಿಸೆಂಬರ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.