ADVERTISEMENT

ಪಟಾಕಿ ನಿಷೇಧ: ನವೆಂಬರ್‌ 9ರಂದು ತೀರ್ಪು

ವಿಚಾರಣೆ ಪೂರ್ಣಗೊಳಿಸಿದ ಎನ್‌ಜಿಟಿ...

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 16:47 IST
Last Updated 5 ನವೆಂಬರ್ 2020, 16:47 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ನವದೆಹಲಿ: ದೀಪಾವಳಿ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಸುವಂತೆ ಕೋರಿರುವ ಮೇಲ್ಮನವಿಯ ವಿಚಾರಣೆಯನ್ನು ಗುರುವಾರ ಪೂರ್ಣಗೊಳಿಸಿರುವ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ತೀರ್ಪನ್ನು ಕಾಯ್ದಿರಿಸಿತು.

ಇಂಡಿಯನ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್‌ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ವೇಳೆ, ಪಟಾಕಿಯಿಂದ ಎದುರಾಗಲಿರುವ ದುಷ್ಪರಿಣಾಮಗಳ ಮಾಹಿತಿ ಪಡೆದ ನ್ಯಾಯಮೂರ್ತಿ ಆದರ್ಶಕುಮಾರ್‌ ಗೋಯೆಲ್‌ ನೇತೃತ್ವದ ಹಸಿರು ಪೀಠ, ಇದೇ 9ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿತು.

ವಾಯು ಮಾಲಿನ್ಯದಿಂದ ಕೋವಿಡ್‌ ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎಂದು ಇತ್ತೀಚಿನ ಅಧ್ಯಯನಗಳು ತಿಳಿಸಿವೆ. ಪಟಾಕಿಯ ಬಳಕೆಯು ವಾಯು ಮಾಲಿನ್ಯ ಹೆಚ್ಚಿಸಲಿದೆ ಎಂದು ನ್ಯಾಯಮಂಡಳಿ ನೇಮಿಸಿರುವ ಆಮಿಕಸ್ ಕ್ಯೂರಿ ತಂಡ ಪೀಠಕ್ಕೆ ಮಾಹಿತಿ ನೀಡಿತು.

ADVERTISEMENT

ಪಟಾಕಿಗಳ ಮಾರಾಟ ಮತ್ತು ಬಳಕೆಯನ್ನು ನಿಷೇಧಿಸುವ ಮೂಲಕ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕಬಹುದು. ಪಟಾಕಿ ಬಳಸುವವರಿಗೆ ₹ 10,000 ದಂಡ ವಿಧಿಸಬೇಕು ಎಂದು ಹಿರಿಯ ವಕೀಲ ರಾಜ್‌ ಪಂಜ್ವಾನಿ ಅವರು ಪೀಠಕ್ಕೆ ತಿಳಿಸಿದರು.

ದೆಹಲಿ, ಹರಿಯಾಣ, ಉತ್ತರ ಪ್ರದೇಶಗಳಲ್ಲಿ ಪಟಾಕಿ ನಿಷೇಧಿಸಬೇಕು ಎಂದು ಕೋರಿ ಇಂಡಿಯನ್‌ ಸೋಷಿಯಲ್‌ ರೆಸ್ಪಾನ್ಸಿಬಿಲಿಟಿ ನೆಟ್‌ವರ್ಕ್‌ ಸಂಸ್ಥೆ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆ ನಡೆಸಿರುವ ಪೀಠವು, ವಾಯು ಮಾಲಿನ್ಯ ಅಧಿಕ ಪ್ರಮಾಣದಲ್ಲಿರುವ ಇತರ 18 ರಾಜ್ಯಗಳಿಗೂ ಬುಧವಾರ ನೋಟಿಸ್‌ ನೀಡಿತ್ತು.

ಕರ್ನಾಟಕದ ಬೆಂಗಳೂರು, ಹುಬ್ಬಳ್ಳಿ– ಧಾರವಾಡ, ಕಲಬುರ್ಗಿ ಹಾಗೂ ದಾವಣಗೆರೆ ನಗರಗಳಲ್ಲಿನ ಗಾಳಿಯ ಗುಣಮಟ್ಟ ಹದಗೆಟ್ಟಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ತಿಳಿಸಿದೆ.

ದೇಶದ 122 ನಗರಗಳಲ್ಲಿ ಮಾಲಿನ್ಯ ಹೆಚ್ಚುವ ಮೂಲಕ ಅಪಾಯಕಾರಿ ಪ್ರಮಾಣದಲ್ಲಿದೆ ಎಂಬ ಅಂಶವನ್ನು ಈ ವರದಿ ಬಹಿರಂಗಪಡಿಸಿದ್ದರಿಂದ ಹಸಿರು ಪೀಠವು ವಿಚಾರಣೆಯ ವ್ಯಾಪ್ತಿಯನ್ನು ವಿಸ್ತರಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.