
ಪುಣೆ: ನ್ಯಾಯಾಧೀಶರ ವರ್ಗಾವಣೆಯು ನ್ಯಾಯಾಂಗದ ಆಂತರಿಕ ವಿಚಾರವಾಗಿದ್ದು, ಈ ಪ್ರಕ್ರಿಯೆಯಲ್ಲಿ ಸರ್ಕಾರಕ್ಕೆ ಯಾವುದೇ ಪಾತ್ರವಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಉಜ್ಜಾಲ್ ಭುಯಾನ್ ಅವರು ಶನಿವಾರ ಪ್ರತಿಪಾದಿಸಿದ್ದಾರೆ.
ಇಲ್ಲಿನ ಐಎಲ್‌ಎಸ್ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು,‘ನ್ಯಾಯಾಂಗದ ಉತ್ತಮ ಆಡಳಿತದ ಉದ್ದೇಶದಿಂದಾಗಿ ನ್ಯಾಯಾಧೀಶರ ವರ್ಗಾವಣೆಗಳನ್ನು ಮಾಡಲಾಗುತ್ತದೆ’ ಎಂದಿದ್ದಾರೆ.
ಪ್ರಕರಣವೊಂದರಲ್ಲಿ ರಾಜ್ಯ ಸರ್ಕಾರದ ವಿರುದ್ಧ ನಿಲುವು ತಳೆದಿದ್ದರು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರದ ಸಲಹೆಯಂತೆ ಮಧ್ಯಪ್ರದೇಶ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಧರನ್ ಅವರನ್ನು ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸುವ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಕೈಗೊಂಡಿತ್ತು. ಅದನ್ನು ನ್ಯಾ. ಭುಯಾನ್ ವಿರೋಧಿಸಿದ್ದರು.
ಆ ಪ್ರಕರಣವನ್ನು ಪ್ರಸ್ತಾಪಿಸದೇ ಮಾತನಾಡಿದ ಅವರು, ‘ಇಂತಹ ನ್ಯಾಯಾಧೀಶರನ್ನು ಇಂಥದ್ದೇ ನ್ಯಾಯಾಲಯಕ್ಕೆ ವರ್ಗಾಯಿಸಿ ಎಂದೋ, ವರ್ಗಾಯಿಸಬಾರದು ಎಂದೋ ಹೇಳುವ ಹಕ್ಕು ಸರ್ಕಾರಕ್ಕೆ ಇಲ್ಲ. ನ್ಯಾಯಾಂಗದ ಸ್ವಾತಂತ್ರ್ಯವು ಸಂವಿಧಾನದ ಮೂಲ ಲಕ್ಷಣವಾಗಿದ್ದು, ಅದರೊಂದಿಗೆ ಯಾವುದೇ ರೀತಿಯ ರಾಜಿಯೂ ಸಲ್ಲದು’ ಎಂದೂ ಹೇಳಿದ್ದಾರೆ.
ಜತೆಗೆ ಸ್ವತಂತ್ರ ನ್ಯಾಯಾಂಗವು ಕಾನೂನು ನಿಯಮಗಳನ್ನು ರಕ್ಷಿಸಲು ಮಾತ್ರ ಬೇಕಿರುವುದಲ್ಲ ಅದು ಪ್ರಜಾಪ್ರಭುತ್ವದ ಆಧಾರ ಸ್ತಂಭ ಎಂದೂ ಭುಯಾನ್ ಹೇಳಿದ್ದಾರೆ.
‘ದೇಶದ ಸ್ಥಾಪಕ ಪಿತಾಮಹರು ಸಂಸತ್ತಿನ ಸಾರ್ವಭೌಮತ್ವಕ್ಕಿಂತ ಸಂವಿಧಾನದ ಶ್ರೇಷ್ಠತೆಗೆ ಒತ್ತು ನೀಡಿದ್ದಾರೆ. ಭಾರತದಲ್ಲಿ ಸಂಸತ್ತು ಸರ್ವೋಚ್ಚವಲ್ಲ, ಸಂವಿಧಾನವೇ ಸರ್ವೋಚ್ಚ’ ಎಂದು ನ್ಯಾಯಮೂರ್ತಿ ಉಜ್ವಲ್ ಭುಯಾನ್ ಹೇಳಿದ್ದಾರೆ.
‘ದೇಶವು ಕಾನೂನು ನಿಯಮಗಳಿಂದ ನಡೆಸಲ್ಪಡುತ್ತಿದೆಯೇ ವಿನಃ ವ್ಯಕ್ತಿಗಳಿಂದ ಅಥವಾ ಬಹುಸಂಖ್ಯಾತರ ಆಳ್ವಿಕೆಯಿಂದಲ್ಲ ಎಂಬುದನ್ನು ಖಾತರಿ ಪಡಿಸುವುದೇ ಸಾಂವಿಧಾನಿಕ ನೈತಿಕತೆ. ಅಧಿಕಾರದಲ್ಲಿ ಇರುವವರು ಅಧಿಕಾರ, ಶಕ್ತಿಯನ್ನು ಬಳಸಿಕೊಂಡು ನಿರ್ಧಾರಗಳನ್ನು ಬದಲಿಸುವ ಬದಲು ಸಾಂವಿಧಾನಿಕ ಮೌಲ್ಯಗಳನ್ನು ಅನುಸರಿಸಬೇಕು’ ಎಂದೂ ಅವರು ಕರೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.