ADVERTISEMENT

ಕೆಲಸದಿಂದ ತೆಗೆಯುವುದಿಲ್ಲವೆಂಬ ನಂಬಿಕೆ ಇದೆ: ನ್ಯಾ. ಜಿ.ಆರ್‌. ಸ್ವಾಮಿನಾಥನ್‌

ಪಿಟಿಐ
Published 25 ಜನವರಿ 2026, 14:49 IST
Last Updated 25 ಜನವರಿ 2026, 14:49 IST
<div class="paragraphs"><p>ನ್ಯಾ. ಜಿ.ಆರ್‌. ಸ್ವಾಮಿನಾಥನ್‌</p></div>

ನ್ಯಾ. ಜಿ.ಆರ್‌. ಸ್ವಾಮಿನಾಥನ್‌

   

ಚೆನ್ನೈ: ‘ಇಂಡಿಯಾ’ ಬಣದ ಸಂಸದರು ತಮ್ಮ ವಿರುದ್ಧ ಮಂಡಿಸಿದ ವಾಗ್ದಂಡನೆ ನೋಟಿಸ್‌ ಕುರಿತು ಮೌನ ಮುರಿದಿರುವ ಮದ್ರಾಸ್‌ ಹೈಕೋರ್ಟ್‌ನ ಮದುರೆ ಪೀಠದ ನ್ಯಾಯಮೂರ್ತಿ ಜಿ.ಆರ್‌. ಸ್ವಾಮಿನಾಥನ್‌, ‘ನನಗೆ ನಾಲ್ಕೂವರೆ ವರ್ಷಗಳ ಸೇವಾವಧಿ ಇದ್ದು, ನನ್ನನ್ನು ಕೆಲಸದಿಂದ ತೆಗೆದುಹಾಕುವುದಿಲ್ಲ ಎಂಬ ನಂಬಿಕೆ ಇದೆ’ ಎಂದು ‌ಹೇಳಿದರು.

ಧಾರಾ ಫೌಂಡೇಶನ್‌ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಜಿ.ಆರ್‌. ಸ್ವಾಮಿನಾಥನ್‌ ಅವರು ದೀಪಸ್ತಂಭದಲ್ಲಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಇದು, ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ತಿರುಪರನ್‌ಕುಂದ್ರಂ ಬೆಟ್ಟದ ಮುರುಗನ್‌ ದೇವಸ್ಥಾನದ ಬಳಿ ಇರುವ ಕಲ್ಲಿನ ದೀಪಸ್ತಂಭದಲ್ಲಿ ದೀಪ ಬೆಳಗಿಸಬೇಕು ಎಂದು ಜಿ.ಆರ್‌. ಸ್ವಾಮಿನಾಥನ್‌ ಅವರೇ ಡಿ.3ರಂದು ನೀಡಿದ್ದ ತೀರ್ಪನ್ನು ಹೋಲುವಂತಿತ್ತು.

ADVERTISEMENT

ಪೀಠದ ತೀರ್ಪನ್ನು ದೇವಸ್ಥಾನದ ಆಡಳಿತ ಮಂಡಳಿ ಪಾಲಿಸಿರಲಿಲ್ಲ. ಬೆಟ್ಟದ ದಾರಿ ಮಧ್ಯೆ ಇರುವ ಗಣೇಶ ದೇವಾಲಯದ (ಉಚ್ಚಿ ಪಿಳ್ಳಯಾರ್‌ ಕೋವಿಲ್‌) ಸಮೀಪ ಕಾರ್ತಿಕ ದೀಪವನ್ನು ಬೆಳಗಿಸಿತ್ತು. ಹೀಗಾಗಿ, ಸ್ವಾಮಿನಾಥನ್‌ ಅವರು ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಿದ್ದರು.

‘ಉಳಿದ ಸೇವಾವಧಿಯಲ್ಲಿ ಸನಾತನ ಧರ್ಮವನ್ನು ಹೃದಯದಲ್ಲಿ ಹೊತ್ತುಕೊಂಡು ವೃತ್ತಿಯಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಆಶಯ ಹೊಂದಿದ್ದೇನೆ. ಈ ಘಟನೆ ನನಗೆ ಅಗತ್ಯವಿರುವ ಆತ್ಮವಿಶ್ವಾಸವನ್ನು ನೀಡುತ್ತಿದೆ’ ಎಂದು ನ್ಯಾಯಮೂರ್ತಿ ಹೇಳಿದರು.

ಡಿಸೆಂಬರ್‌ 9ರಂದು ಇಂಡಿಯಾ ಬಣದ 100ಕ್ಕೂ ಹೆಚ್ಚು ಸಂಸದರು, ಸ್ವಾಮಿನಾಥನ್‌ ಅವರನ್ನು ವಾಗ್ದಂಡನೆಗೆ ಗುರಿಪಡಿಸುವಂತೆ ಕೋರಿ ಲೋಕಸಭೆಯ ಸ್ಪೀಕರ್‌ಗೆ ನೋಟಿಸ್‌ ನೀಡಿದ್ದರು. ಇದನ್ನು ಬಿಜೆಪಿ ಮತ್ತು ಇತರ ರಾಜಕೀಯ ಪಕ್ಷಗಳು ಟೀಕಿಸಿದ್ದವು.

ಜನವರಿ 23ರಂದು ನಡೆದ ಎನ್‌ಡಿಎ ರ‍್ಯಾಲಿ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನ್ಯಾಯಮೂರ್ತಿ ಸ್ವಾಮಿನಾಥನ್‌ ವಿರುದ್ಧದ ವಾಗ್ದಂಡನೆ ನೋಟಿಸ್‌ ಕುರಿತು ಪರೋಕ್ಷವಾಗಿ ಉಲ್ಲೇಖಿಸಿದ್ದರು. ‘ಈ ವಿಷಯದಲ್ಲಿ ಡಿಎಂಕೆ ತನ್ನ ಮತಬ್ಯಾಂಕ್‌ ರಕ್ಷಿಸಿಕೊಳ್ಳಲು ನ್ಯಾಯಾಂಗವನ್ನೂ ಬಿಟ್ಟಿಲ್ಲ’ ಎಂದು ಆರೋಪಿಸಿದ್ದರು.

2014ರಲ್ಲಿ ಮದುರೆ ಪೀಠದಲ್ಲಿ ಸಹಾಯಕ ಸಾಲಿಸಿಟರ್‌ ಜನರಲ್‌ ಆಗಿ ನೇಮಕಗೊಂಡ ನ್ಯಾಯಮೂರ್ತಿ ಸ್ವಾಮಿನಾಥನ್‌, ತಮಿಳುನಾಡಿನಲ್ಲಿ ಹಿಂದೂಗಳ ಪರ ಹೋರಾಡುತ್ತಿರುವ ಹಿಂದೂ ಮುನ್ನಾನಿ ಸಂಘಟನೆಯೊಂದಿಗಿನ ತಮ್ಮ ಸಂಬಂಧದ ಬಗ್ಗೆ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದರು. ಮೂರು ವರ್ಷಗಳ ನಂತರ, ಅವರನ್ನು ಮದುರೆ ಪೀಠದಲ್ಲಿ ಹೆಚ್ಚುವರಿ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿತ್ತು. ನಂತರ ಕಾಯಂ ನ್ಯಾಯಮೂರ್ತಿಯನ್ನಾಗಿ ನೇಮಿಸಲಾಗಿತ್ತು.

  • ದೀಪಸ್ತಂಭದಲ್ಲಿ ದೀಪ ಬೆಳಗಿಸುವಂತೆ ತೀರ್ಪು ನೀಡಿದ್ದ ನ್ಯಾಯಮೂರ್ತಿ ವಾಗ್ದಂಡನೆ ನೋಟಿಸ್‌ ನೀಡಿದ್ದ ‘ಇಂಡಿಯಾ’ ಬಣದ ಸಂಸದರು

  • ಹೃದಯದಲ್ಲಿ ಸನಾತನ ಧರ್ಮ ಹೊತ್ತುಕೊಂಡಿರುವೆ: ಜಿ.ಆರ್‌. ಸ್ವಾಮಿನಾಥನ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.