ADVERTISEMENT

ನ್ಯಾ. ಯಶವಂತ್‌ ವರ್ಮಾ ಪದಚ್ಯುತಿಗೆ 100ಕ್ಕೂ ಹೆಚ್ಚು ಸಂಸದರಿಂದ ಸಹಿ: ರಿಜಿಜು

ಪಿಟಿಐ
Published 20 ಜುಲೈ 2025, 13:11 IST
Last Updated 20 ಜುಲೈ 2025, 13:11 IST
ಕಿರಣ್‌ ರಿಜಿಜು
ಕಿರಣ್‌ ರಿಜಿಜು   

ನವದೆಹಲಿ: ಅಲಹಾಬಾದ್‌ ಹೈಕೋರ್ಟ್‌ನ ನ್ಯಾಯಮೂರ್ತಿ ಯಶವಂತ್‌ ವರ್ಮಾ ಅವರನ್ನು ಪದಚ್ಯುತಗೊಳಿಸುವ ನಿರ್ಣಯವನ್ನು ಸಂಸತ್ತಿನಲ್ಲಿ ಮಂಡಿಸುವ ನೋಟಿಸ್‌ಗೆ 100ಕ್ಕೂ ಹೆಚ್ಚು ಸಂಸದರು ಸಹಿ ಹಾಕಿದ್ದಾರೆ ಎಂದು ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಭಾನುವಾರ ಹೇಳಿದ್ದಾರೆ.

‘ಸಹಿ ಸಂಗ್ರಹ ಪ್ರಕ್ರಿಯೆ ಮುಂದುವರಿದಿದ್ದು, ಈಗಾಗಲೇ 100ಕ್ಕೂ ಹೆಚ್ಚು ಸಂಸದರು ಸಹಿ ಹಾಕಿದ್ದಾರೆ’ ಎಂದು ಸರ್ವಪಕ್ಷಗಳ ಸಭೆಯ ಬಳಿಕ ತಿಳಿಸಿದ್ದಾರೆ. 

ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನ್ಯಾಯಮೂರ್ತಿಗಳನ್ನು ಪದಚ್ಯುತಗೊಳಿಸುವ ಅಧಿಕಾರ ಸಂಸತ್ತಿಗೆ ಇದೆ. ನ್ಯಾಯಮೂರ್ತಿಯೊಬ್ಬರನ್ನು ಪದಚ್ಯುತಗೊಳಿಸುವ ನಿರ್ಣಯವನ್ನು ಮಂಡಿಸಲು ಲೋಕಸಭೆಯಲ್ಲಿ ಕನಿಷ್ಠ 100 ಮತ್ತು ರಾಜ್ಯಸಭೆಯಲ್ಲಿ 50 ಸದಸ್ಯರ ಬೆಂಬಲ ಬೇಕಿದೆ. 

ADVERTISEMENT

ಸೋಮವಾರ (ಜುಲೈ 21) ಆರಂಭವಾಗಲಿರುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ನಿರ್ಣಯ ಮಂಡಿಸುವುದಾಗಿ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ. ನಿರ್ಣಯವನ್ನು ಲೋಕಸಭೆಯಲ್ಲಿ ಮಂಡಿಸುವ ಸಾಧ್ಯತೆಯಿದೆ.

‘ನಿರ್ಣಯವನ್ನು ಯಾವಾಗ ಮಂಡಿಸಬೇಕು ಎಂಬುದನ್ನು ನಿರ್ಧರಿಸುವುದು ಸದನಗಳ ಕಾರ್ಯಸೂಚಿಯನ್ನು ಅಂತಿಮಗೊಳಿಸುವ ಕಲಾಪ ಸಲಹಾ ಸಮಿತಿಯ ಜವಾಬ್ದಾರಿಯಾಗಿದೆ. ಆದ್ದರಿಂದ ನಿರ್ಣಯ ಮಂಡಿಸುವ ದಿನಾಂಕದ ಬಗ್ಗೆ ಯಾವುದೇ ಘೋಷಣೆ ಮಾಡುವುದಿಲ್ಲ’ ಎಂದು ರಿಜಿಜು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.