ADVERTISEMENT

ಜಗನ್‌ಗೆ ಕೆಸಿಆರ್‌ ಗಾಳ: ಒಕ್ಕೂಟರಂಗಕ್ಕೆ ಆಹ್ವಾನ

ತೆಲುಗುದೇಶಂ ಪಕ್ಷದ ಮುಖ್ಯಸ್ಥ ಚಂದ್ರಬಾಬು ನಾಯ್ಡು ಹಣಿಯಲು ಟಿಆರ್‌ಎಸ್‌ ತಂತ್ರ

ಪಿಟಿಐ
Published 16 ಜನವರಿ 2019, 19:51 IST
Last Updated 16 ಜನವರಿ 2019, 19:51 IST
ಟಿಆರ್‌ಎಸ್‌ ಕಾರ್ಯಾಧ್ಯಕ್ಷ ಟಿ. ರಾಮಾ ರಾವ್‌ ಬುಧವಾರ ಹೈದರಾಬಾದ್‌ನಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ವೈ.ಎಸ್‌. ಜಗಮೋಹನ್‌ ರೆಡ್ಡಿ ಜತೆ ಮಾತುಕತೆ ನಡೆಸಿದರು –ಪಿಟಿಐ ಚಿತ್ರ
ಟಿಆರ್‌ಎಸ್‌ ಕಾರ್ಯಾಧ್ಯಕ್ಷ ಟಿ. ರಾಮಾ ರಾವ್‌ ಬುಧವಾರ ಹೈದರಾಬಾದ್‌ನಲ್ಲಿ ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ವೈ.ಎಸ್‌. ಜಗಮೋಹನ್‌ ರೆಡ್ಡಿ ಜತೆ ಮಾತುಕತೆ ನಡೆಸಿದರು –ಪಿಟಿಐ ಚಿತ್ರ   

ಹೈದರಾಬಾದ್: ಲೋಕಸಭಾ ಚುನಾವಣೆಗೂ ಮುನ್ನ ಒಕ್ಕೂಟ ರಂಗ ರಚಿಸುವ ತೆಲಂಗಾಣ ಮುಖ್ಯಮಂತ್ರಿ ಮತ್ತು ಟಿಆರ್‌ಎಸ್‌ ಮುಖ್ಯಸ್ಥ ಕೆ. ಚಂದ್ರಶೇಖರ್‌ ರಾವ್‌ (ಕೆಸಿಆರ್‌) ಅವರ ಪ್ರಯತ್ನ ತೀವ್ರಗೊಂಡಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಕ್ಕೆ ಪರ್ಯಾಯವಾಗಿ ರಾಷ್ಟ್ರಮಟ್ಟದಲ್ಲಿ ಪ್ರಾದೇಶಿಕ ಪಕ್ಷಗಳ ಹೊಸ ರಾಜಕೀಯ ಶಕ್ತಿ ಹುಟ್ಟು ಹಾಕುವ ಉದ್ದೇಶದೊಂದಿಗೆ ಕೆಸಿಆರ್‌ ಈಗಾಗಲೇ ಅನೇಕ ಪ್ರಾದೇಶಿಕ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದಾರೆ.

ಅದರ ಮುಂದುವರಿದ ಭಾಗವಾಗಿ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪ್ರಭಾವ ಹೊಂದಿರುವ ವೈಎಸ್‌ಆರ್‌ ಕಾಂಗ್ರೆಸ್‌ ಮುಖ್ಯಸ್ಥ ವೈ.ಎಸ್‌. ಜಗಮೋಹನ್‌ ರೆಡ್ಡಿ ಅವರಿಗೆ ಕೆಸಿಆರ್‌ ಗಾಳ ಹಾಕಿದ್ದಾರೆ.

ADVERTISEMENT

ಕಾಂಗ್ರೆಸ್‌ ಜತೆ ಸೇರಿ ಮಹಾಕೂಟ ರಚಿಸಿಕೊಂಡಿರುವ ತೆಲುಗುದೇಶಂ ನಾಯಕ ಮತ್ತು ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಅವರನ್ನು ರಾಜಕೀಯವಾಗಿ ಹಣಿಯಲು ಅವರ ಕಟ್ಟಾ ರಾಜಕೀಯ ವಿರೋಧಿ ಜಗನ್‌ ವರ್ಚಸ್ಸನ್ನು ಬಳಸಿಕೊಳ್ಳುವುದು ಕೆಸಿಆರ್‌ ಲೆಕ್ಕಾಚಾರವಾಗಿದೆ.

ಕೆಸಿಆರ್‌ ಪುತ್ರ ಹಾಗೂ ಟಿಆರ್‌ಎಸ್‌ ಕಾರ್ಯಾಧ್ಯಕ್ಷ ಟಿ. ರಾಮಾ ರಾವ್‌ ಬುಧವಾರ ಹೈದರಾಬಾದ್‌ನಲ್ಲಿ ಜಗಮೋಹನ್‌ ರೆಡ್ಡಿ ಅವರನ್ನು ಕಂಡು ಒಕ್ಕೂಟ ರಂಗ ಸೇರುವಂತೆ ಆಹ್ವಾನ ನೀಡಿದ್ದಾರೆ.

ಒಕ್ಕೂಟ ರಂಗ ರಚನೆ ಪ್ರಯತ್ನದ ಆರಂಭವಾದ ನಂತರ ಮೊದಲ ಬಾರಿಗೆ ಎರಡೂ ಪಕ್ಷಗಳ ನಾಯಕರು ಮುಖಾಮುಖಿಯಾಗಿದ್ದಾರೆ.

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಒಡಿಶಾ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌, ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ ಮತ್ತು ಡಿಎಂಕೆ ಅಧ್ಯಕ್ಷ ಎಂ.ಕೆ. ಸ್ಟಾಲಿನ್‌ ಅವರನ್ನು ಕೆಸಿಆರ್‌ ಈಗಾಗಲೇ ಭೇಟಿ ಮಾಡಿದ್ದಾರೆ.

ಮೈತ್ರಿಕೂಟದ ತೆಕ್ಕೆಗೆ ಆರ್‌ಎಲ್‌ಡಿ

ಲಖನೌ: ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಪ್ರಾಬಲ್ಯ ಹೊಂದಿರುವ ರಾಷ್ಟ್ರೀಯ ಲೋಕದಳ (ಆರ್‌ಎಲ್‌ಡಿ) ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಎಸ್‌ಪಿ–ಎಸ್‌ಪಿ ಮೈತ್ರಿಕೂಟ ಸೇರುವ ಸುಳಿವು ನೀಡಿದೆ.

ಆರ್‌ಎಲ್‌ಡಿ ರಾಷ್ಟ್ರೀಯ ಉಪಾಧ್ಯಕ್ಷ ಜಯಂತ್‌ ಚೌಧರಿ ಬುಧವಾರ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಅವರನ್ನು ಭೇಟಿಯಾಗಿ ಸ್ಥಾನ ಹೊಂದಾಣಿಕೆ ಕುರಿತು ಚರ್ಚಿಸಿದ್ದಾರೆ.

ಬಿಎಸ್‌ಪಿ–ಎಸ್‌ಪಿ ತಲಾ 38 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಮಿತ್ರಪಕ್ಷಗಳಿಗೆ ಎರಡು ಕ್ಷೇತ್ರಗಳನ್ನು ಮೀಸಲಿಟ್ಟಿವೆ. ಆರ್‌ಎಲ್‌ಡಿಗೆ 3–4 ಕ್ಷೇತ್ರ ಬಿಟ್ಟು ಕೊಡಲು ಮೈತ್ರಿಕೂಟ ಒಪ್ಪಿದೆ. ಆದರೆ, ಐದು ಕ್ಷೇತ್ರಗಳಿಗಾಗಿ ಬೇಡಿಕೆ ಇಟ್ಟಿದೆ. ಸಮಾಜವಾದಿ ಪಕ್ಷ ತನ್ನ 38 ಕ್ಷೇತ್ರಗಳಲ್ಲಿ ಒಂದು ಅಥವಾ ಎರಡು ಕ್ಷೇತ್ರಗಳನ್ನು ಬಿಟ್ಟು ಕೊಡಲು ಸಿದ್ಧವಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.