ADVERTISEMENT

ಮೋದಿ ತೆಲಂಗಾಣಕ್ಕಿಂತ ಹೆಚ್ಚು ಅಭಿವೃದ್ಧಿ ಸಾಧಿಸಿರುವ ರಾಜ್ಯದ ಹೆಸರೇಳಿ: ಕೆಟಿಆರ್

ಪಿಟಿಐ
Published 9 ಏಪ್ರಿಲ್ 2023, 11:12 IST
Last Updated 9 ಏಪ್ರಿಲ್ 2023, 11:12 IST
ಕೆ. ಟಿ ರಾಮರಾವ್‌
ಕೆ. ಟಿ ರಾಮರಾವ್‌   

ಹೈದರಾಬಾದ್‌: ತೆಲಂಗಾಣ ರಾಜ್ಯವು ಇತರೆ ರಾಜ್ಯಗಳಿಗಿಂತ ಉತ್ತಮ ಪ್ರದರ್ಶನವನ್ನು ನೀಡುತ್ತಿದೆ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸಣ್ಣತನದ ರಾಜಕಾರಣದಿಂದಾಗಿ ರಾಜ್ಯದ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಆರ್‌ಎಸ್‌ ನಾಯಕ ಮತ್ತು ರಾಜ್ಯ ಸಚಿವ ಕೆ.ಟಿ ರಾಮರಾವ್ ಭಾನುವಾರ ಆರೋಪಿಸಿದ್ದಾರೆ.

ಸಿಕಂದರಾಬಾದ್‌ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮೋದಿ, ತೆಲಂಗಾಣದಲ್ಲಿ ಅನುಷ್ಠಾನಗೊಳಿಸುವ ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರ ಅಡ್ಡಗಾಲು ಹಾಕುತ್ತಿದೆ ಎಂದು ಟೀಕಾಪ್ರಹಾರ ಮಾಡಿದ್ದರು. ಕೇಂದ್ರದ ಯೋಜನೆಗಳಿಗೆ ರಾಜ್ಯ ಸರ್ಕಾರ ಸೂಕ್ತ ಸಹಕಾರ ನೀಡುತ್ತಿಲ್ಲ. ಇದು ತೆಲಂಗಾಣ ಜನರ ಕನಸುಗಳ ಮೇಲೆ ಪರಿಣಾಮ ಉಂಟುಮಾಡುತ್ತಿದೆ. ಇದರಿಂದ ತಾವು ನೊಂದಿರುವುದಾಗಿ ಹೇಳಿಕೊಂಡಿದ್ದರು.

'ತೆಲಂಗಾಣದ ಜನರಿಗಾಗಿ ರೂಪಿಸಿರುವ ಅಭಿವೃದ್ಧಿ ಯೋಜನೆಗಳಿಗೆ ತೊಡಕಾಗುವುದಕ್ಕೆ ರಾಜ್ಯ ಸರ್ಕಾರ ಅವಕಾಶ ಮಾಡಿಕೊಡಬಾರದು ಎಂದು ಮನವಿ ಮಾಡುತ್ತೇನೆ' ಎಂದು ಹೇಳಿದ್ದರು.

ADVERTISEMENT

ಇದಕ್ಕೆ ಪ್ರತಿಕ್ರಿಯಿಸಿರುವ ರಾಮರಾವ್, ‘ವಿವಿಧ ಕ್ಷೇತ್ರಗಳಲ್ಲಿ ತೆಲಂಗಾಣ ರಾಜ್ಯ ಮಾಡಿರುವ ಸಾಧನೆಗಳ ಪಟ್ಟಿಯನ್ನು ಟ್ಟೀಟ್‌ ಮಾಡುವ ಮೂಲಕ ಕಳೆದ ಒಂಭತ್ತು ವರ್ಷಗಳಲ್ಲಿ ಎಲ್ಲಾ ಕ್ಷೇತ್ರಗಳಲ್ಲೂ ತೆಲಂಗಾಣಕ್ಕಿಂತ ಉತ್ತಮವಾಗಿ ಸಾಧನೆ ಮಾಡಿರುವ ರಾಜ್ಯವನ್ನು ಮೋದಿ ಹೇಳಲಿ’ ಎಂದು ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದ ಎಲ್ಲಾ ಮನೆಗಳಿಗೂ ಕುಡಿಯುವ ನೀರಿನ ಸೌಲಭ್ಯ ಒದಗಿಸಲಾಗಿದೆ. ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ. ತೆಲಂಗಾಣವು ಭಾರತದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವ ಎರಡನೇ ರಾಜ್ಯವಾಗಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಅತಿ ಹೆಚ್ಚಿನ ಉದ್ಯೋಗಗಳನ್ನು ಸೃಷ್ಟಿಸುತ್ತಿದೆ ಹಾಗೂ ಹಲವಾರು ಅಂತರರಾಷ್ಟ್ರೀಯ ಪುರಸ್ಕಾರಗಳನ್ನು ಪಡೆದುಕೊಂಡಿದೆ. ಇಷ್ಟೆಲ್ಲಾ ಸಾಧನೆಗಳನ್ನು ಮಾಡಿದ್ದರು ಕೂಡ ಪ್ರಧಾನಿ ಮೋದಿ ಅವರು ಮೆಚ್ಚುಗೆಯ ಒಂದು ಮಾತನ್ನು ಸಹ ಹೇಳಲಿಲ್ಲ. ತಮ್ಮ ಕ್ಷುಲಕ ರಾಜಕೀಯಕ್ಕಾಗಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಜ್ಯವನ್ನು ಒಪ್ಪಿಕೊಳ್ಳಲು ನಿರಾಕರಿಸುತ್ತಿದ್ದಾರೆ ಎಂದು ರಾಮರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ನರೇಂದ್ರ ಮೋದಿಯವರೇ ನಾನು ನಿಮಗೆ ಸವಾಲು ಹಾಕುತ್ತಿದ್ದೇನೆ. ಕಳೆದ ಒಂಭತ್ತು ವರ್ಷಗಳಲ್ಲಿ ತೆಲಂಗಾಣ ರಾಜ್ಯಕ್ಕಿಂತ ಹೆಚ್ಚು ಅಭಿವೃದ್ಧಿ ಸಾಧಿಸಿರುವ ರಾಜ್ಯದ ಹೆಸರು ಹೇಳಿ?’ ಎಂದು ರಾಮರಾವ್ ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.