
ಹೈದರಾಬಾದ್: ಸಾಮಾಜಿಕ ಜಾಲತಾಣಗಳನ್ನು ಮಕ್ಕಳು ಹೆಚ್ಚಾಗಿ ಬಳಸುವುದರಿಂದ ಅವರ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತದೆ. ಹಾಗಾಗಿ, ಬಳಕೆಯ ಮೇಲೆ ನಿಯಂತ್ರಣ ವಿಧಿಸುವುದಕ್ಕೆ ನನ್ನ ಬೆಂಬಲವಿದೆ ಎಂದು ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರು ಶನಿವಾರ ಹೇಳಿದ್ದಾರೆ.
ಕೈಲಾಶ್ ಸತ್ಯಾರ್ಥಿ ಅವರು ಹೈದರಾಬಾದ್‌ನಲ್ಲಿ ಜರುಗುತ್ತಿರುವ ಸಾಹಿತ್ಯ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಅವರ ‘ಕರುಣ; ದಿ ಪವರ್ ಆಫ್ ಕಂಪ್ಯಾಷನ್’ ಕೃತಿ ಬಿಡುಗಡೆಗೊಳಿಸಿ ಮಾತನಾಡಿದರು.
ಆಸ್ಟ್ರೇಲಿಯಾ ಸೇರಿದಂತೆ ಕೆಲವು ದೇಶಗಳು ಮಾಡಿದಂತೆ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಿ ಎಂದು ನಾನು ಹೇಳುತ್ತಿಲ್ಲ. ಆದರೆ, ಅದರ ಮೇಲೆ ಕೆಲವು ನಿಯಂತ್ರಣಗಳನ್ನು ಹೇರುವುದರಿಂದ ನೈತಿಕ ಮೌಲ್ಯಗಳನ್ನು ಹೊಂದಿರುವ ಸಮುದಾಯವನ್ನು ನಿರ್ಮಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೂಲಕ ದ್ವೇಷ, ಅಶಾಂತಿ ಉಂಟು ಮಾಡುವ ಕೆಲಸವಾಗುತ್ತಿದೆ. ಸತ್ಯಕ್ಕಿಂತ ಹೆಚ್ಚು ಸುಳ್ಳು ಸುದ್ದಿಗಳು ಅದರಲ್ಲಿ ಹರಡುತ್ತವೆ. ಇದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎಂದು ತಿಳಿಸಿದ್ದಾರೆ.
ಮಕ್ಕಳ ಕಳ್ಳಸಾಗಣೆ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಜಾಲತಾಣಗಳನ್ನು ಬಳಸಿಕೊಳ್ಳಲಾಗುತ್ತಿದೆ. ಇದರ ಮೇಲೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕು. ಈ ಕುರಿತು ಅಂತರರಾಷ್ಟ್ರೀಯ ಕಾನೂನು ಜಾರಿ ಮಾಡುವಂತೆ ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ಆಂಧ್ರಪ್ರದೇಶ ಸರ್ಕಾರವು 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ಬಳಕೆಗೆ ನಿರ್ಬಂಧ ವಿಧಿಸುವ ಕುರಿತು ವರದಿ ನೀಡುವಂತೆ ಸಮಿತಿಯನ್ನು ಕೂಡ ರಚಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.