ಚೆನ್ನೈ: ನಟ, ರಾಜಕಾರಣಿ ಕಮಲ್ ಹಾಸನ್ ಅವರು ತಮಿಳುನಾಡಿನ ಆಡಳಿತಾರೂಢ ಡಿಎಂಕೆ ಪಕ್ಷದ ಬೆಂಬಲದೊಂದಿಗೆ ರಾಜ್ಯಸಭೆಗೆ ಪ್ರವೇಶಿಸಲು ಸಜ್ಜಾಗಿದ್ದಾರೆ.
ಲೋಕಸಭಾ ಚುನಾವಣೆಗೆ ಮುನ್ನ 2024ರ ಮಾರ್ಚ್‌ನಲ್ಲಿ ಕಮಲ್ ಹಾಸನ್ ನೇತೃತ್ವದ ಮಕ್ಕಳ್ ನೀಧಿ ಮಯ್ಯಂ (ಎಂಎನ್‌ಎಂ) ಪಕ್ಷವು ಡಿಎಂಕೆ ನೇತೃತ್ವದ ಮೈತ್ರಿಕೂಟದೊಂದಿಗೆ ಕೈಜೋಡಿಸಿತ್ತು. ಈ ವೇಳೆ 70 ವರ್ಷದ ಕಮಲ್ ಹಾಸನ್ ಅವರನ್ನು ರಾಜ್ಯಸಭೆಗೆ ಕಳುಹಿಸುವ ಭರವಸೆಯನ್ನು ನೀಡಲಾಗಿತ್ತು.
ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಆಸಕ್ತಿ ತೋರದೇ ಇದ್ದ ಕಮಲ್ ಹಾಸನ್ ಅವರು ರಾಜ್ಯಸಭೆಯ ಸ್ಥಾನವನ್ನು ಕೇಳಿದ್ದರು.
‘ಡಿಎಂಕೆ ಗೆಲ್ಲಬಹುದಾದ ನಾಲ್ಕು ಸ್ಥಾನಗಳಲ್ಲಿ ಒಂದು ಸ್ಥಾನಕ್ಕೆ ಕಮಲ್ ಹಾಸನ್ ಅವರ ಹೆಸರನ್ನು ಅಂತಿಮಗೊಳಿಸಲಾಗಿದೆ. ಉಳಿದ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲು ಪ್ರಕ್ರಿಯೆ ನಡೆಯುತ್ತಿದೆ’ ಎಂದು ಡಿಎಂಕೆಯ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
2024ರಲ್ಲಿ ನಡೆದಿದ್ದ ಒಪ್ಪಂದದ ಭಾಗವಾಗಿ, ಕಮಲ್ ಹಾಸನ್ ಅವರು ಲೋಕಸಭಾ ಚುನಾವಣೆ ವೇಳೆ ಡಿಎಂಕೆ ಮೈತ್ರಿಕೂಟದ ಅಭ್ಯರ್ಥಿಗಳ ಪರವಾಗಿ ರಾಜ್ಯದಾದ್ಯಂತ ಪ್ರಚಾರ ಮಾಡಿದ್ದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ನಟ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಸವಾಲನ್ನು ಎದುರಿಸಲು ಕಮಲ್ ಹಾಸನ್ ಅವರ ತಾರಾ ವರ್ಚಸ್ಸನ್ನು ಬಳಸಿಕೊಳ್ಳಲು ಡಿಎಂಕೆ ಯೋಜನೆ ಹಾಕಿಕೊಂಡಿದೆ.
‘ಪಿ.ವಿಲ್ಸನ್ ಮತ್ತು ಎಂ.ಎಂ.ಅಬ್ದುಲ್ಲಾ ಅವರನ್ನು ಪಕ್ಷವು ಮತ್ತೊಂದು ಅವಧಿಗೆ ರಾಜ್ಯಸಭೆಗೆ ಕಳುಹಿಸುವ ಸಾಧ್ಯತೆಯಿದೆ. ಇನ್ನೊಂದು ಸ್ಥಾನಕ್ಕೆ ಅಭ್ಯರ್ಥಿಯನ್ನು ಇನ್ನೂ ಅಂತಿಮಗೊಳಿಸಿಲ್ಲ’ ಎಂದು ಮೂಲಗಳು ತಿಳಿಸಿವೆ.
ವೈಕೊ ಮತ್ತು ಕಾರ್ಮಿಕ ಸಂಘಟನೆಯ ನಾಯಕ ಎಂ.ಷಣ್ಮುಗಂ ಅವರನ್ನು ರಾಜ್ಯಸಭೆಗೆ ಮರುನಾಮಕರಣ ಮಾಡುವ ಸಾಧ್ಯತೆ ಕಡಿಮೆ ಎಂದು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.