ಮುಂಬೈ: ಹಾಸ್ಯನಟ ಕುನಾಲ್ ಕಾಮ್ರಾ ಅವರ ವಿವಾದಾತ್ಮಕ ಹೇಳಿಕೆ ಸಂಬಂಧ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ್, ಬೇರೊಬ್ಬರ ವಿರುದ್ಧ ಮಾತನಾಡಲು 'ಸುಪಾರಿ' ತೆಗೆದುಕೊಂಡಂತಿದೆ ಎಂದು ಹೇಳಿದ್ದಾರೆ.
ಬೇರೊಬ್ಬರ ಬಗ್ಗೆ ಮಾತನಾಡುವಾಗ ಕನಿಷ್ಢ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು. ವಾಕ್ ಸ್ವಾತಂತ್ರ್ಯವಿದೆ, ಆದರೆ ಅದಕ್ಕೂ ಒಂದು ಮಿತಿ ಇರಬೇಕು. ಇಲ್ಲದಿದ್ದರೆ ಕ್ರಿಯೆಯು ಪ್ರತಿಕ್ರಿಯೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ವಿಡಂಬನೆ ಅರ್ಥವಾಗುತ್ತದೆ. ಆದರೆ ಅದಕ್ಕೊಂದು ಮಿತಿ ಇರಬೇಕು. ಆದರೆ ಕಾಮ್ರಾ ನೀಡಿರುವ ಹೇಳಿಕೆ ಬೇರೊಬ್ಬರ ವಿರುದ್ಧ ಮಾತನಾಡಲು ಸುಪಾರಿ ತೆಗೆದುಕೊಂಡಂತೆ ಕಾಣುತ್ತಿದೆ ಎಂದು ಶಿಂದೆ ತಿಳಿಸಿದ್ದಾರೆ.
ಇದೇ ವ್ಯಕ್ತಿ (ಕಾಮ್ರಾ) ಭಾರತದ ಸುಪ್ರೀಂ ಕೋರ್ಟ್, ಪ್ರಧಾನಿ, ಅರ್ನಬ್ ಗೋಸ್ವಾಮಿ (ಪತ್ರಕರ್ತ) ಮತ್ತು ಕೆಲವು ಕೈಗಾರಿಕೋದ್ಯಮಿಗಳ ಬಗ್ಗೆ ಕಾಮೆಂಟ್ ಮಾಡಿದ್ದರು. ಇದು ವಾಕ್ ಸ್ವಾತಂತ್ರ್ಯವಲ್ಲ. ಇವರ ಹೇಳಿಕೆಗಳನ್ನು ಗಮನಿಸಿದರೆ ಯಾರಿಗೋ ಕೆಲಸ ಮಾಡುತ್ತಿದ್ದಾರೆ ಎಂದು ಭಾಸವಾಗುತ್ತದೆ ಎಂದು ಶಿಂದೆ ಹೇಳಿದ್ದಾರೆ.
ಶಿಂದೆ ಅವರ ಬಗ್ಗೆ ನೀಡಿರುವ ವಿವಾದಾತ್ಮಕ ಹೇಳಿಕೆಗಳಿಗೆ ಕ್ಷಮೆಯಾಚಿಸುವುದಿಲ್ಲ ಎಂದು ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಹೇಳಿದ್ದಾರೆ. ಮುಂಬೈನಲ್ಲಿ ಹಾಸ್ಯ ಕಾರ್ಯಕ್ರಮ ನಡೆದ ಸ್ಥಳದ ವಿಧ್ವಂಸಕ ಕೃತ್ಯವನ್ನು ಖಂಡಿಸಿದ್ದಾರೆ.
2022ರಲ್ಲಿ ಏಕನಾಥ ಶಿಂದೆ ಅವರು ಉದ್ಧವ್ ಠಾಕ್ರೆ ವಿರುದ್ಧ ನಡೆಸಿದ ಬಂಡಾಯವನ್ನು ವಿವರಿಸಲು ಕುನಾಲ್ ಅವರು ‘ದಿಲ್ ತೊ ಪಾಗಲ್ ಹೈ’ ಸಿನಿಮಾದ ಹಾಡೊಂದನ್ನು ಮಾರ್ಪಾಡು ಮಾಡಿ ಹಾಡಿದ್ದರು. ಇದರಿಂದ ಕೆರಳಿದ ಶಿವಸೇನಾ ಕಾರ್ಯಕರ್ತರು ಕುನಾಲ್ ಅವರು ಈ ಹಾಡನ್ನು ಹೇಳಿದ್ದ ಕಾರ್ಯಕ್ರಮ ಚಿತ್ರೀಕರಿಸಿದ್ದ ‘ಹ್ಯಾಬಿಟ್ಯಾಟ್ ಸ್ಟುಡಿಯೊ’ದಲ್ಲಿ ಭಾನುವಾರ ರಾತ್ರಿ ದಾಂದಲೆ ನಡೆಸಿದ್ದರು.
ಶಿಂದೆ ಅವರನ್ನು ಗುರಿಯಾಗಿಸಿ ಅವಹೇಳನಕಾರಿ ಮಾತು ಆಡಿದ್ದಾರೆ ಎಂಬ ಆರೋಪದ ಅಡಿಯಲ್ಲಿ ಮುಂಬೈ ಪೊಲೀಸರು ಕುನಾಲ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.