ADVERTISEMENT

ತೆಲಂಗಾಣ: ಸಿಎಂ ಚಂದ್ರಶೇಖರ ರಾವ್ ಯಶಸ್ಸಿನ ಹಿಂದಿದೆ ಕೇಶವ ರಾವ್ ಶ್ರಮ

ಪ್ರಜಾ ಮತ 2019

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2019, 14:28 IST
Last Updated 1 ಏಪ್ರಿಲ್ 2019, 14:28 IST
ಕಂಚೇರ್ಲ ಕೇಶವ ರಾವ್(ಎಡದಲ್ಲಿರುವವರು) ಜತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಚಿತ್ರ ಕೃಪೆ: ಕಂಚೇರ್ಲ ಕೇಶವ ರಾವ್ ಫೇಸ್‌ಬುಕ್ ಪುಟ)
ಕಂಚೇರ್ಲ ಕೇಶವ ರಾವ್(ಎಡದಲ್ಲಿರುವವರು) ಜತೆ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ (ಚಿತ್ರ ಕೃಪೆ: ಕಂಚೇರ್ಲ ಕೇಶವ ರಾವ್ ಫೇಸ್‌ಬುಕ್ ಪುಟ)   

ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರ ರಾಜಕೀಯ ತಂತ್ರಗಾರಿಕೆ, ಯಶಸ್ಸಿನ ಹಿಂದೆ ಹಲವು ನಾಯಕರ ಬೌದ್ಧಿಕ ಶ್ರಮವಿದೆ. ಆ ಪೈಕಿ ಪ್ರಮುಖರುಕಂಚೇರ್ಲ ಕೇಶವ ರಾವ್. ತೆಲಂಗಾಣದ ರಾಜಕೀಯ ವಲಯದಲ್ಲಿ ಕೆಕೆ ಎಂದೇ ಪ‍್ರಸಿದ್ಧರು.

ಕೇಂದ್ರದಲ್ಲಿ ಯುಪಿಎ ಸರ್ಕಾರವಿದ್ದಾಗ ಆಂಧ್ರ ಪ್ರದೇಶ ವಿಭಜನೆಯಾಗಿ ತೆಲಂಗಾಣ ರಚನೆಯಾಯಿತು. ಆ ಸಂದರ್ಭ, ಕೇಶವ ರಾವ್ ಅವರ ಮುತ್ಸದ್ದಿತನ ಮತ್ತು ಮನವೊಲಿಸುವ ಕೌಶಲ ಚಂದ್ರಶೇಖರ ರಾವ್ ಅವರ ನೆರವಿಗೆ ಬಂದಿತ್ತು. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಕಾಂಗ್ರೆಸ್ ಜತೆ ವಿಲೀನವಾಗದಂತೆ ನೋಡಿಕೊಳ್ಳುವಲ್ಲಿ, ಆ ನಿಟ್ಟಿನಲ್ಲಿಚಂದ್ರಶೇಖರ ರಾವ್ ಅವರನ್ನು ತಡೆಯುವಲ್ಲಿ ಕೇಶವ ರಾವ್ ಪ್ರಮುಖ ಪಾತ್ರ ವಹಿಸಿದ್ದರು. ಕಾಂಗ್ರೆಸ್ ಜತೆ ಸೇರಿದರೆ ಜನ ನಿಮ್ಮನ್ನು ಕ್ಷಮಿಸಲಾರರು ಎಂಬುದನ್ನು ಕೇಶವ ರಾವ್ ಅವರೇ ಚಂದ್ರಶೇಖರ ರಾವ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು ಎನ್ನಲಾಗಿದೆ.

ಮರಿ ಚೆನ್ನ ರೆಡ್ಡಿ ಅವರು 1967ರಲ್ಲಿ ಪ್ರತ್ಯೇಕ ರಾಜ್ಯ ಚಳವಳಿ ಆರಂಭಿಸಿದಾಗ ಚಂದ್ರಶೇಖರ ರಾವ್ ಅದರ ಪರವಾಗಿರಲಿಲ್ಲ. ಆದರೆ ಪ್ರತ್ಯೇಕ ರಾಜ್ಯ ಕೂಗು ರಾಜಕೀಯ ಆಯಾಮ ಪಡೆದುಕೊಳ್ಳುತ್ತಿದ್ದಂತೆ ನಿಲುವು ಬದಲಾಯಿಸಿದರು. ನಂತರ ಕಾಂಗ್ರೆಸ್ ತ್ಯಜಿಸಿಟಿಆರ್‌ಎಸ್ ಸೇರಿದರು.

ತೆಲಂಗಾಣ ರಚನೆಯಾದ ಬಳಿಕ ನಡೆದ ವಿಧಾನಸಭೆ ಚುನಾವಣೆ ವೇಳೆಕೇಶವ ರಾವ್ ಅವರನ್ನು ಟಿಆರ್‌ಎಸ್‌ನ ಪ್ರಣಾಳಿಕೆ ಸಮಿತಿ ಅಧ್ಯಕ್ಷರನ್ನಾಗಿ ರಾವ್ ನೇಮಕ ಮಾಡಿದರು. ಬಳಿಕ ಟಿಆರ್‌ಎಸ್ ಅಧಿಕಾರಕ್ಕೇರಿತು.

1939ರ ಜೂನ್ 6ರಂದು ಹೈದರಾಬಾದ್‌ನಲ್ಲಿ ಜನಿಸಿದ್ದಕೇಶವ ರಾವ್ ಪತ್ರಕರ್ತರಾಗಿ ವೃತ್ತಿ ಜೀವನ ಆರಂಭಿಸಿದವರು. ಬಳಿಕ ರಾಜಕೀಯ ಪ್ರವೇಶಿಸಿದ ಅವರು ಅವಿಭಜಿತ ಆಂಧ್ರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದಾರೆ. ಸದ್ಯ ಟಿಆರ್‌ಎಸ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದು, ರಾಜ್ಯಸಭಾ ಸದಸ್ಯರೂ ಆಗಿದ್ದಾರೆ.

ಇವರು ಮಾತ್ರವಲ್ಲದೆ,ಕೆ.ಚಂದ್ರಶೇಖರ ರಾವ್ ಅವರ ರಾಜಕೀಯ ಯಶಸ್ಸಿನ ಹಿಂದೆ ಅವರ ಮಗ ಕೆ. ರಾಮ ರಾವ್, ಸಮೀಪದ ಸಂಬಂಧಿ ಸಂತೋಷ್ ಕುಮಾರ್ ಪಾತ್ರವೂ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.