ADVERTISEMENT

ಮುಂಬೈ ಪಾಲಿಕೆ ಸಿಬ್ಬಂದಿ ನನ್ನ ಕಚೇರಿ ನೆಲಸಮ ಮಾಡುತ್ತಾರೆ: ಕಂಗನಾ ಆತಂಕ

ಪಿಟಿಐ
Published 8 ಸೆಪ್ಟೆಂಬರ್ 2020, 10:40 IST
Last Updated 8 ಸೆಪ್ಟೆಂಬರ್ 2020, 10:40 IST
ಕಂಗನಾ ರನೋಟ್
ಕಂಗನಾ ರನೋಟ್   

ಮುಂಬೈ: ಮುಂಬೈ ನಗರವನ್ನು ಪಾಕ್‌ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿ ಸುದ್ದಿಯಾಗಿ, ವೈ ಪ್ಲಸ್ ಭದ್ರತೆ ಪಡೆದಿರುವ ಬಾಲಿವುಡ್‌ ನಟಿ ಕಂಗನಾ ರನೋಟ್, ಬೃಹನ್‌ಮುಂಬೈ ಮಹಾನಗರ ಪಾಲಿಕೆ ಸಿಬ್ಬಂದಿ ತಮ್ಮ ಕಚೇರಿಯನ್ನು ನೆಲಸಮ ಮಾಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ತಮ್ಮ ಟ್ವಿಟರ್‌ ‌ ಖಾತೆಯಲ್ಲಿ ಕಚೇರಿಗೆ ಬಿಎಂಸಿ ಅಧಿಕಾರಿಗಳು ಭೇಟಿ ನೀಡಿರುವ ವಿಡಿಯೊಗಳನ್ನು ಶೇರ್‌ ಮಾಡಿರುವ ಅವರು, ‘ಶಿವಸೇನಾ ನೇತೃತ್ವದ ಮಹಾನಗರ ಪಾಲಿಕೆಯವರು ಮಂಗಳವಾರ ನನ್ನ ಕಚೇರಿಯನ್ನು ಪರಿಶೀಲಿಸುತ್ತಿದ್ದು, ಅದನ್ನು ಒಡೆದು ಹಾಕಬಹುದು‘ ಎಂದು ಬರೆದುಕೊಂಡಿದ್ದಾರೆ.

ಈ ಕಾರ್ಯಾಚರಣೆ ಕುರಿತು ಮಾತನಾಡಿರುವ ಮಹಾನಗರ ಪಾಲಿಕೆ ಸಿಬ್ಬಂದಿ, ‘ಪಾಲಿಕೆ ಬಾಂದ್ರಾ ಉಪನಗರದಲ್ಲಿ ಪ್ರತಿ ವರ್ಷ ನಡೆಸುವ ಅಕ್ರಮ ಕಟ್ಟಡಗಳ ತೆರವು ಕಾರ್ಯಾರಣೆಯ ಭಾಗವಾಗಿ, ಹೀಗೆ ಪರಿಶೀಲನೆ ನಡೆಸುತ್ತಿದ್ದೇವೆ‘ ಎಂದು ಸ್ಪಷ್ಟಪಡಿಸಿದ್ದಾರೆ.

ADVERTISEMENT

‌ಇದಕ್ಕೆ ಟ್ವಿಟರ್‌ನಲ್ಲಿ ಪ್ರತಿಕ್ರಿಯಿಸಿರುವ ಕಂಗನಾ, ‘ನನ್ನ ಕಚೇರಿ ಅಕ್ರಮ ಕಟ್ಟಡವಾಗಿಲ್ಲ. ಹಾಗೇನಾದರೂ ಇದ್ದರೆ, ಬಿಎಂಸಿ ಅಧಿಕಾರಿಗಳು, ದಾಖಲೆ ತೋರಿಸಬೇಕು‘ ಎಂದು ಕೇಳಿದ್ದಾರೆ.

‘ಪಾಲಿಕೆ ಸಿಬ್ಬಂದಿ ಬಲವಂತವಾಗಿ ನನ್ನ ಕಚೇರಿಗೆ ನುಗ್ಗಿ ಅಳತೆ ಮಾಡುತ್ತಾ, ಸುತ್ತ ಮುತ್ತಲಿನವರಿಗೂ ತೊಂದರೆ ಕೊಡುತ್ತಿದ್ದಾರೆ‘ ಎಂದು ಆರೋಪಿಸಿರುವ ಕಂಗನಾ, ‘ಖಂಡಿತಾ ಇವರು ನನ್ನ ಆಸ್ತಿಯನ್ನೆಲ್ಲ ನೆಲಸಮ ಮಾಡುತ್ತಾರೆ ಎಂಬ ಮಾಹಿತಿ ಇದೆ‘ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮುಂಬೈನ ಬಾಂದ್ರಾ ಉಪನಗರದ ದುಬಾರಿ ಪಾಲಿ ಹಿಲ್‌ ಪ್ರದೇಶದಲ್ಲಿರುವ ಸಾಲು ಮನೆಗಳಲ್ಲಿರುವ ಕಂಗನಾ ಅವರ ಕಚೇರಿಯನ್ನು ಬಿಎಂಸಿ ಅಧಿಕಾರಿಗಳ ತಂಡ ಪರಿಶೀಲಿಸಿದೆ‘ ಎಂದು ಮಹಾನಗರ ಪಾಲಿಕೆ ಆಯುಕ್ತ ಪರಾಗ್ ಮಸೂರ್ಕರ್‌ ಸ್ಪಷ್ಟಪಡಿಸಿದ್ದಾರೆ.

‘ದಾಖಲೆಗಳ ಪ್ರಕಾರ, ಕಂಗನಾ ಅವರ ಕಚೇರಿ ಇರುವ ಜಾಗ ವಸತಿ ಪ್ರದೇಶವಾಗಿತ್ತೇ ಎಂದು ತಿಳಿಯುವುದಕ್ಕಾಗಿ ಪಾಲಿಕೆ ಸಿಬ್ಬಂದಿ ಅವರ ಕಚೇರಿಯನ್ನು ಪರಿಶೀಲಿಸಿದ್ದಾರೆ'ಎಂದು ಮಸೂರ್ಕರ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.