ADVERTISEMENT

ಮುಂಬೈ: ಬಾಲಿವುಡ್‌ ನಟಿ ಕಂಗನಾ ರನೌತ್‌ ವಿರುದ್ಧ ಎಫ್‌ಐಆರ್‌ ದಾಖಲು

ಪಿಟಿಐ
Published 23 ನವೆಂಬರ್ 2021, 14:04 IST
Last Updated 23 ನವೆಂಬರ್ 2021, 14:04 IST
ಕಂಗನಾ ರನೌತ್‌
ಕಂಗನಾ ರನೌತ್‌   

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸಿಖ್‌ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ ಆರೋಪದಡಿಬಾಲಿವುಡ್‌ ನಟಿ ಕಂಗನಾರನೌತ್‌ ವಿರುದ್ಧ ಮುಂಬೈನಲ್ಲಿ ಮಂಗಳವಾರ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

‘ದೆಹಲಿ ಸಿಖ್‌ ಗುರುದ್ವಾರ ಮ್ಯಾನೇಜ್‌ಮೆಂಟ್‌ ಕಮಿಟಿಯು (ಡಿಎಸ್‌ಜಿಎಂಸಿ) ಖಾರ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿತ್ತು. ಈ ಸಂಬಂಧ ಕಂಗನಾ ವಿರುದ್ಧ ಐಪಿಸಿ ಸೆಕ್ಷನ್‌295ಎ ಅಡಿ ‍ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಡಿಎಸ್‌ಜಿಎಂಸಿಯ ಸದಸ್ಯನಾಗಿರುವ ಮುಂಬೈ ಮೂಲದ ಉದ್ಯಮಿ ಅಮರ್‌ಜೀತ್‌ ಸಿಂಗ್‌ ಸಂಧು, ಕಂಗನಾ ವಿರುದ್ಧ ಸೋಮವಾರ ದೂರು ದಾಖಲಿಸಿದ್ದರು. ಈ ಬಳಿಕ ಮಹಾರಾಷ್ಟ್ರದ ಗೃಹ ಸಚಿವ ದಿಲೀಪ್‌ ವಾಲ್ಸೆ ಪಾಟೀಲ್‌ ಹಾಗೂ ಮುಂಬೈ ಪೊಲೀಸ್‌ ಇಲಾಖೆಯ ಉನ್ನತ ಅಧಿಕಾರಿಗಳನ್ನು ಭೇಟಿಯಾದ ಶಿರೋಮಣಿ ಅಕಾಲಿದಳದ ನಾಯಕ ಮತ್ತು ಡಿಎಸ್‌ಜಿಎಂಸಿ ಅಧ್ಯಕ್ಷ ಮನ್‌ಜಿಂದರ್‌ ಸಿಂಗ್‌ ಸಿರ್ಸಾ ನೇತೃತ್ವದ ನಿಯೋಗವುಕಂಗನಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿತು.

ADVERTISEMENT

ಕಂಗನಾ ಅವರು ರೈತರ ಪ್ರತಿಭಟನೆಯನ್ನು ಉದ್ದೇಶಪೂರ್ವಕವಾಗಿ ಖಾಲಿಸ್ತಾನಿ ಆಂದೋಲನಕ್ಕೆ ಹೋಲಿಸಿದ್ದಾರೆ ಹಾಗೂ ಸಿಖ್‌ ಸಮುದಾಯವನ್ನು ಖಾಲಿಸ್ತಾನಿ ಉಗ್ರರು ಎಂದು ಬಿಂಬಿಸಿದ್ದಾರೆ. ಅಲ್ಲದೇ, 1984ರ ಸಿಖ್‌ ವಿರೋಧಿ ದಂಗೆಯನ್ನೂ ಅವರು ಉಲ್ಲೇಖಿಸಿದ್ದಾರೆ. ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಸಿಖ್‌ ಸಮುದಾಯದ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದ್ದಾರೆ. ಈ ಮೂಲಕ ಸಿಖ್‌ ಸಮುದಾಯದವರ ಭಾವನೆಗೆ ಧಕ್ಕೆಯನ್ನುಂಟು ಮಾಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.