ADVERTISEMENT

ಮಂಡಿ: ಕಂಗನಾ ರನೌತ್‌ಗೆ ಕಪ್ಪು ಬಾವುಟ ಪ್ರದರ್ಶನ

ಪಿಟಿಐ
Published 20 ಮೇ 2024, 13:58 IST
Last Updated 20 ಮೇ 2024, 13:58 IST
ಕಂಗನಾ ರನೌತ್
ಕಂಗನಾ ರನೌತ್   

ಶಿಮ್ಲಾ: ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ನಟಿ ಕಂಗನಾ ರನೌತ್‌ ಅವರು ಸೋಮವಾರ ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಸ್ಥಳೀಯರಿಂದ ಪ್ರತಿಭಟನೆ ಎದುರಿಸಿದ್ದಾರೆ. 

ಕಾಜಾ, ಲಾಹೌಲ್ ಮತ್ತು ಸ್ಪೀತಿಯಲ್ಲಿ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ಕಾಂಗ್ರೆಸ್‌ ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶಿಸಿದರಲ್ಲದೆ, ‘ಗೋ ಬ್ಯಾಕ್‌ ಕಂಗನಾ’ ಎಂದು ಘೋಷಣೆ ಕೂಗಿದರು. ಕಂಗನಾ ಮತ್ತು ಅವರ ಜತೆಗಿದ್ದವರನ್ನು ಗುರಿಯಾಗಿಸಿ ಕಲ್ಲು ಎಸೆಯಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.

ಕಂಗನಾ ಅವರು ಕಳೆದ ಏಪ್ರಿಲ್‌ನಲ್ಲಿ ಟಿಬೆಟನ್‌ ಧರ್ಮಗುರು ದಲೈ ಲಾಮಾ ಅವರನ್ನು ಲೇವಡಿ ಮಾಡುವ ಮೀಮ್‌ವೊಂದನ್ನು ‘ಎಕ್ಸ್‌’ನಲ್ಲಿ ಹಂಚಿಕೊಂಡಿದ್ದರು. ಅದರ ಬೆನ್ನಲ್ಲೇ ಬೌದ್ಧ ಸಂಘಟನೆಗಳು ಕಂಗನಾ ಅವರ ಮುಂಬೈನ ನಿವಾಸದ ಮುಂದೆ ಪ್ರತಿಭಟನೆ ನಡೆಸಿದ್ದವು. ಕಂಗನಾ ಆ ಬಳಿಕ ಕ್ಷಮೆಯಾಚಿಸಿದ್ದರು. ಆ ಘಟನೆಯನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದ್ದಾರೆ

ADVERTISEMENT

‘ಬಿಜೆಪಿಗೆ ರ್‍ಯಾಲಿ ನಡೆಸಲು ಅನುಮತಿ ನೀಡಲಾಗಿದ್ದ ಸ್ಥಳದ ಸನಿಹದಲ್ಲೇ ಕಾಂಗ್ರೆಸ್‌ ರ್‍ಯಾಲಿಗೂ ಅವಕಾಶ ನೀಡಲಾಗಿದ್ದು ದುರದೃಷ್ಟಕರ. ನಮ್ಮ ರ್‍ಯಾಲಿಯನ್ನು ತಡೆಯಲು ಕಾಂಗ್ರೆಸ್‌ ಕಾರ್ಯಕರ್ತರು ಯತ್ನಿಸಿದ್ದಾರೆ. ಘೋಷಣೆಗಳನ್ನು ಕೂಗಿ, ನಮ್ಮತ್ತ ಕಲ್ಲೆಸೆದರು’ ಎಂದು ಕಾಜಾದಲ್ಲಿ ಕಂಗನಾ ಜತೆ ಪ್ರಚಾರದಲ್ಲಿ ಪಾಲ್ಗೊಂಡಿದ್ದ ಹಿಮಾಚಲ ಪ್ರದೇಶ ವಿಧಾನಸಭೆ ವಿರೋಧ ಪಕ್ಷದ ನಾಯಕ ಜೈರಾಮ್ ಠಾಕೂರ್‌ ದೂರಿದ್ದಾರೆ.

‘ನಾವು ಇಡೀ ರಾಜ್ಯದಲ್ಲಿ ಪ್ರಚಾರ ಕೈಗೊಂಡಿದ್ದು, ಈ ರೀತಿಯ ಕಹಿ ಘಟನೆ ಎದುರಿಸಬೇಕಾಗಿ ಬಂದದ್ದು ಇದೇ ಮೊದಲು’ ಎಂದು ಹೇಳಿದ್ದಾರೆ.

‘ಕಾಂಗ್ರೆಸ್‌ ಕಾರ್ಯಕರ್ತರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ದಲೈ ಲಾಮಾ ಬಗ್ಗೆ ಕಂಗನಾ ಆಡಿದ್ದ ಮಾತಿನಿಂದ ನೋವು ಅನುಭವಿಸಿದ್ದವರು ದೊಡ್ಡ ಸಂಖ್ಯೆಯಲ್ಲಿ ಬಂದು ಪ್ರತಿಭಟನೆಯಲ್ಲಿ ಸೇರಿಕೊಂಡರು’ ಎಂದು ಸ್ಥಳೀಯ ಕಾಂಗ್ರೆಸ್‌ ಮುಖಂಡ ಬಿಷನ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.