ADVERTISEMENT

ರಾಜಕೀಯ ಪ್ರವೇಶಕ್ಕೆ ಕನ್ಹಯ್ಯಾ ಸಜ್ಜು;ಬಿಹಾರದ ಬೇಗುಸರಾಯ್‌ನಿಂದ ಅಖಾಡಕ್ಕೆ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2018, 20:15 IST
Last Updated 25 ಅಕ್ಟೋಬರ್ 2018, 20:15 IST
ಕನ್ಹಯ್ಯಾ
ಕನ್ಹಯ್ಯಾ   

ಪಟ್ನಾ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಹಾರದಿಂದ ಸ್ಪರ್ಧಿಸುವ ಮೂಲಕ ಅಧಿಕೃತವಾಗಿ ರಾಜಕೀಯರಂಗ ಪ್ರವೇಶಿಸುವುದಾಗಿ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ವಿದ್ಯಾರ್ಥಿ ನಾಯಕರಾಗಿದ್ದ ಕನ್ಹಯ್ಯಾ ಕುಮಾರ್‌ ಘೋಷಿಸಿದ್ದಾರೆ.

ತಮ್ಮ ಹುಟ್ಟೂರಾದ ಬಿಹಾರದ ಬೇಗುಸರಾಯ್‌ ಲೋಕಸಭಾ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಚುನಾವಣಾ ಅಖಾಡಕ್ಕೆ ಧುಮುಕುವ ಇಂಗಿತವನ್ನು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದಲ್ಲಿ ಅವರು ಹಂಚಿಕೊಂಡಿದ್ದಾರೆ.

ಮಹಾಮೈತ್ರಿ ಕೂಟದಲ್ಲಿರುವ ಆರ್‌ಜೆಡಿ, ಕಾಂಗ್ರೆಸ್‌, ಜಿತನ್‌ ರಾಮ್‌ ಮಾಂಝಿ ನೇತೃತ್ವದ ಹಿಂದುಸ್ತಾನ್‌ ಅವಾಮ್‌ ಮೋರ್ಚಾದಂತಹ (ಎಚ್‌ಎಎಂ) ಸದಸ್ಯ ಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಈಗಲೇ ಈ ಬಗ್ಗೆ ಹೆಚ್ಚಿಗೆ ಏನಾದರೂ ಹೇಳುವುದು ಅವಸರವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಎಡ ಪಕ್ಷಗಳು ಕೂಡ ಮಹಾಮೈತ್ರಿ ಕೂಟವನ್ನು ಸೇರಿದ್ದು, ಸಿಪಿಐ ಇತ್ತೀಚೆಗೆ ಕನ್ಹಯ್ಯಾ ಅವರನ್ನು ರಾಷ್ಟ್ರೀಯ ಮಂಡಳಿ ಸದಸ್ಯರನ್ನಾಗಿ ನೇಮಕ ಮಾಡಿದೆ.

ಬೇಗುಸರಾಯ್‌ ಲೋಕಸಸಭಾ ಕ್ಷೇತ್ರದಿಂದ ಸಿಪಿಐ ಅಭ್ಯರ್ಥಿಯಾಗಿ ಕಣಕ್ಕೆ ಇಳಿಯಲು ಮಹಾಮೈತ್ರಿ ಕೂಟ ಈಗಾಗಲೇ ಕನ್ಹಯ್ಯಾ ಅವರಿಗೆ ಒಪ್ಪಿಗೆ ಕೊಟ್ಟಿದೆ ಎಂದು ವಿಶ್ವಸನೀಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮಾಧ್ಯಮಗಳ ನಿಲುವು ಪ್ರಶ್ನಾರ್ಹ

ಮಾಧ್ಯಮಗಳಿಗೂ ಕೂಡ ಜಾತಿ, ಧರ್ಮಗಳೇ ಮಹತ್ವದ ವಿಷಯಗಳಾಗಿ ಕಾಣುತ್ತಿರುವುದು ವಿಪರ್ಯಾಸ ಎಂದು ಅವರು ತರಾಟೆಗೆ ತೆಗೆದುಕೊಂಡರು.

ಜಾತಿ, ಧರ್ಮದ ಹೆಸರಲ್ಲಿ ಸಮಾಜವನ್ನು ವಿಂಗಡಿಸುವುದನ್ನು ಬಲವಾಗಿ ವಿರೋಧಿಸಿದ ಅವರು, ಎಲ್ಲರನ್ನೂ ಒಳಗೊಂಡ ಮತ್ತು ಎಲ್ಲ ಸಮುದಾಯಗಳನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಪ್ರಜಾಪ್ರಭುತ್ವದಲ್ಲಿ ಮಾತ್ರ ತಮಗೆ ನಂಬುಗೆ ಇದೆ ಎಂದರು. ತಮ್ಮ ವಿರುದ್ಧ ದೇಶದ್ರೋಹ ಆರೋಪ ಹೊರಿಸಿದ ನಂತರವೂ ಬಿಜೆಪಿ ಮತ್ತು ಬೆಂಬಲಿಗ ಸಂಘಟನೆಗಳಿಗೆ ಸಮಾಧಾನವಾಗಿಲ್ಲ. ಪದೇ ಪದೇ ತಮ್ಮ ಮತ್ತು ತಮ್ಮ ವ್ಯಕ್ತಿತ್ವದ ಮೇಲೆ ಹಲ್ಲೆ ನಡೆಸುತ್ತಿವೆ ಎಂದುಕನ್ಹಯ್ಯಾ ಆರೋಪಿಸಿದರು.

ಕನ್ಹಯ್ಯಾ ಎದುರಾಳಿ ಗಿರಿರಾಜ್‌?

ಸದಾ ಒಂದಿಲ್ಲ ಒಂದು ವಿವಾದದಿಂದ ಸುದ್ದಿಯಲ್ಲಿರುವ ಕೇಂದ್ರ ಸಚಿವ ಗಿರಿರಾಜ್‌ ಸಿಂಗ್‌ ಅವರನ್ನು ಕನ್ಹಯ್ಯಾ ಕುಮಾರ್‌ ವಿರುದ್ಧ ಅಖಾಡಕ್ಕೆ ಇಳಿಸಲು ಬಿಜೆಪಿ ಚಿಂತಿಸುತ್ತಿದೆ.

ಗಿರಿರಾಜ್‌ ಸಿಂಗ್‌ ಸದ್ಯ ಪ್ರತಿನಿಧಿಸುತ್ತಿರುವ ನವಾಡ ಲೋಕಸಭಾ ಕ್ಷೇತ್ರದ ಬದಲು ಬೇಗುಸರಾಯ್‌ನಿಂದ ಅವರನ್ನು ಬಿಜೆಪಿ ಕಣಕ್ಕಿಳಿಸುವ ಸಾಧ್ಯತೆ ಇದೆ.

ಎಲ್ಲವೂ ನಿರೀಕ್ಷೆಯಂತೆ ನಡೆದರೆ ಬೇಗುಸರಾಯ್‌ನಲ್ಲಿ ಗಿರಿರಾಜ್‌ ಸಿಂಗ್‌ ಮತ್ತು ಕನ್ಹಯ್ಯಾ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ.

ಭುಮಿಹಾರ್‌ ಮತಗಳೇ ನಿರ್ಣಾಯಕ: ಬಹುಸಂಖ್ಯಾತ ಮೇಲ್ವರ್ಗವಾದ ಭೂಮಿಹಾರ್‌ ಸಮುದಾಯ ಬಿಹಾರದ ರಾಜಕೀಯದಲ್ಲಿ ನಿರ್ಣಾಯಕವಾಗಿದೆ.

ಗಿರಿರಾಜ್ ಸಿಂಗ್‌ ಮತ್ತು ಕನ್ಹಯ್ಯಾ ಇಬ್ಬರೂ ಭುಮಿಹಾರ್‌ ಸಮುದಾಯಕ್ಕೆ ಸೇರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.