
ಜೈಪುರ: ಉದಯಪುರದಲ್ಲಿ 2022ರಲ್ಲಿ ಹತ್ಯೆಗೀಡಾದ ದರ್ಜಿ ಕನ್ಹಯ್ಯ ಲಾಲ್ ಅವರ ಕುಟುಂಬಕ್ಕೆ ನ್ಯಾಯ ಒದಗಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಶೋಕ್ ಗೆಹಲೋತ್ ಶನಿವಾರ ಆರೋಪಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜಸ್ಥಾನಕ್ಕೆ ಶನಿವಾರ ಭೇಟಿನೀಡಿದ ಕುರಿತು ಮಾತನಾಡಿದ ಅಶೋಕ್ ಗೆಹಲೋತ್, ‘ಅಮಿತ್ ಶಾ ಅವರು ತಮ್ಮ ರಾಜಕೀಯ ಮೌನವನ್ನು ಮುರಿಯಬೇಕು ಮತ್ತು ಕನ್ಹಯ್ಯ ಲಾಲ್ ಕುಟುಂಬಕ್ಕೆ ಯಾವಾಗ ನ್ಯಾಯ ಸಿಗುತ್ತದೆ ಎಂಬುದನ್ನು ಹೇಳಬೇಕು’ ಎಂದರು.
‘ಕನ್ಹಯ್ಯ ಹತ್ಯೆಯ ಘಟನೆ ನಡೆದ ರಾತ್ರಿಯಂದೇ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಪ್ರಕರಣವನ್ನು ಪೊಲೀಸರಿಂದ ವಹಿಸಿಕೊಂಡಿತು. ಎನ್‌ಐಎಯು ಕೇಂದ್ರ ಗೃಹ ಸಚಿವಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಎನ್‌ಐಎ ತನಿಖೆ ನಡೆಸುತ್ತಿದ್ದರೂ ಇನ್ನೂ ಏಕೆ ಕನ್ಹಯ್ಯ ಕುಟುಂಬಕ್ಕೆ ನ್ಯಾಯ ದೊರಕಿಲ್ಲ’ ಎಂದು ಪ್ರಶ್ನಿಸಿದರು.
‘ಕನ್ಹಯ್ಯ ಕುಟುಂಬಕ್ಕೆ ಪರಿಹಾರ ನೀಡಿರುವುದಾಗಿ ಅಮಿತ್ ಶಾ ಅವರು ಚುನಾವಣೆ ಸಮಯದಲ್ಲಿ ಸುಳ್ಳು ಪ್ರಚಾರ ಮಾಡುತ್ತಿದ್ದಾರೆ. ಆದರೆ ₹50 ಲಕ್ಷವನ್ನು ಪರಿಹಾರವನ್ನು ಹಾಗೂ ಇಬ್ಬರೂ ಪುತ್ರರಿಗೆ ಸರ್ಕಾರಿ ನೌಕರಿ ನೀಡಿರುವುದು ಕಾಂಗ್ರೆಸ್ ಸರ್ಕಾರ ಎಂದು ಕನ್ಹಯ್ಯ ಅವರ ಕುಟುಂಬ ಹೇಳಿದೆ. ರಾಜಸ್ಥಾನದ ಜನರನ್ನು ದಾರಿ ತಪ್ಪಿಸಿದ್ದಕ್ಕಾಗಿ ಬಿಜೆಪಿ ಕ್ಷಮೆಯಾಚಿಸಬೇಕು’ ಎಂದರು.
ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂ ವಿರುದ್ಧದ ಪೋಸ್ಟ್ ಅನ್ನು ಬೆಂಬಲಿಸಿದ್ದರು ಎಂಬ ಕಾರಣಕ್ಕೆ, ತಮ್ಮ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಕನ್ಹಯ್ಯ ಅವರನ್ನು ಇಬ್ಬರು ವ್ಯಕ್ತಿಗಳು ಹತ್ಯೆ ಮಾಡಿದರು. ಈ ಘಟನೆಯು ದೇಶದಾದ್ಯಂತ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ರಾಜಸ್ಥಾನದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ನೆಲಸಮವಾಗಿದೆ. ಸುಲಿಗೆ ಅತ್ಯಾಚಾರ ಹಾಗೂ ಮಾಫಿಯಾ ಚಟುವಟಿಕೆಗಳು ಹೆಚ್ಚಾಗುತ್ತಿವೆ. ಬಾಷಣಗಳ ಬದಲು ಗೃಹ ಸಚಿವರು ರಾಜಸ್ಥಾನದ ಪರಿಸ್ಥಿತಿ ಕುರಿತು ಉತ್ತರಿಸಬೇಕು–ಅಶೋಕ್ ಗೆಹಲೋತ್, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಕಾಂಗ್ರೆಸ್ ನಾಯಕ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.