ADVERTISEMENT

ಮುಂಬೈ ಹೈಕೋರ್ಟ್‌ನ ಕನ್ನಡಿಗ ನ್ಯಾಯಮೂರ್ತಿ ಹೊಸಬೆಟ್ಟು ಸುರೇಶ್ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 12 ಜೂನ್ 2020, 10:58 IST
Last Updated 12 ಜೂನ್ 2020, 10:58 IST
ಜಸ್ಟೀಸ್‌ ಹೊಸಬೆಟ್ಟು ಸುರೇಶ್‌ 
ಜಸ್ಟೀಸ್‌ ಹೊಸಬೆಟ್ಟು ಸುರೇಶ್‌    

ಮುಂಬೈ: ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಕನ್ನಡಿಗ ಜಸ್ಟಿಸ್‌ ಹೊಸಬೆಟ್ಟು ಸುರೇಶ್ (91) ಗುರುವಾರ ಮುಂಬೈನಲ್ಲಿ ನಿಧನರಾಗಿದ್ದಾರೆ.

ಮೂಲತಃ ಸುರತ್ಕಲ್‌ ಬಳಿಯ ಹೊಸಬೆಟ್ಟು ಗ್ರಾಮದವರಾದ ಅವರು ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನಿವೃತ್ತರಾದ ನಂತರ ಮುಂಬೈನಲ್ಲೇ ನೆಲೆಸಿದ್ದರು.

1929ರ ಜೂನ್‌ 11ರಂದು ಹೊಸಬೆಟ್ಟು ಗ್ರಾಮದಲ್ಲಿ ಜನಸಿದ್ದ ಅವರುಸುರತ್ಕಲ್ ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮುಗಿಸಿದ್ದರು. ಮಂಗಳೂರು ಸ್ನಾತಕೋತ್ತರ ಕೇಂದ್ರದಿಂದ ಪದವಿ ಪಡೆದ ನಂತರ ಕಾನೂನು ಅಧ್ಯಯನಕ್ಕೆ ಮುಂಬೈಗೆ ತೆರಳಿದ್ದರು.

ADVERTISEMENT

ಬಾಂಬೆ ವಿಶ್ವವಿದ್ಯಾಲಯದಿಂದ ಕಾನೂನು ಪದವಿ, ಸ್ನಾತಕೋತ್ತರ ಪದವಿ ಪಡೆದು, 1953ರಲ್ಲಿ ಬಾಂಬೆ ಹೈಕೋರ್ಟ್‌ನಲ್ಲಿ ವಕೀಲಿಕೆ ಆರಂಭಿಸಿದ್ದರು. ಮುಂಬೈ ಕೆ.ಸಿ. ಕಾನೂನು ಮಹಾವಿದ್ಯಾಲಯದಲ್ಲಿ ಗೌರವ ಪ್ರಾಧ್ಯಾಪಕರಾಗಿಯೂ ಸೇವೆ ಸಲ್ಲಿಸಿದ್ದರು.

1987ರಲ್ಲಿ ಬಾಂಬೆ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಅಧಿಕಾರವಹಿಸಿಕೊಂಡಿದ್ದ ಹೊಸಬೆಟ್ಟು, 1991ರಲ್ಲಿ ನಿವೃತ್ತರಾಗಿದ್ದರು. ನಿವೃತ್ತಿ ನಂತರ ಮಾನವ ಹಕ್ಕುಗಳ ಉಲ್ಲಂಘನೆ ವಿಚಾರಣೆಗೆ ನೇಮಕವಾಗಿದ್ದ ಹಲವಾರು ಸಮಿತಿಗಳ ನೇತೃತ್ವ ವಹಿಸಿದ್ದರು.

ಮಾನವ ಹಕ್ಕುಗಳ ಬಗ್ಗೆ ತುಂಬಾ ಕಾಳಜಿ ಹೊಂದಿದ್ದ ಅವರು, ಅನೇಕ ಮಹತ್ವದ ತೀರ್ಪುಗಳನ್ನು ನೀಡಿದ್ದರು. ಮುಂಬೈನಲ್ಲಿ ನೆಲೆಸಿದ್ದರೂ ಕರ್ನಾಟಕ, ಕನ್ನಡಿಗರ ಬಗ್ಗೆ ಅಪಾರ ಅಭಿಮಾನ ಹೊಂದಿದ್ದರು.

ಗುಜರಾತ್ ಗೋಧ್ರಾ ಹತ್ಯಾಕಾಂಡದ ಕುರಿತು ಹೊಸಬೆಟ್ಟು, ಪಿ.ಬಿ.ಸಾವಂತ್ ಅವರನ್ನು ಒಳಗೊಂಡಿದ್ದ ನ್ಯಾಯಮೂರ್ತಿ ವಿ. ಆರ್ ಕೃಷ್ಣ ಅಯ್ಯರ್ ನೇತೃತ್ವದ ಸಮಿತಿ (ಐಪಿಟಿ ಸತ್ಯಶೋಧನಾ ಸಮಿತಿ) ‘Crime Against Humanity’ ಎಂಬ ವರದಿ ಸಲ್ಲಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.