ADVERTISEMENT

ಎನ್‌ಕೌಂಟರ್‌ನಲ್ಲಿ ಹತನಾದ ರೌಡಿ ಶೀಟರ್‌ ವಿಕಾಸ್‌ ದುಬೆ ಆಪ್ತ ಸಹಾಯಕ, ಸಹಚರ ಬಂಧನ

ಪಿಟಿಐ
Published 20 ಜುಲೈ 2020, 12:13 IST
Last Updated 20 ಜುಲೈ 2020, 12:13 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಾನ್ಪುರ:ಎನ್‌ಕೌಂಟರ್‌ನಲ್ಲಿ ಹತನಾದ ರೌಡಿ ಶೀಟರ್‌ ವಿಕಾಸ್‌ ದುಬೆಯ ಆಪ್ತ ಸಹಾಯಕ ಜೈ ಬಾಜಪೇಯಿ ಮತ್ತು ಆತನ ಸಹಚರನನ್ನು ಸೋಮವಾರ ಬಂಧಿಸಲಾಗಿದೆ.

ಕ್ರಿಮಿನಲ್‌ ಪಿತೂರಿ ಮತ್ತು ಕಾನ್ಪುರ ಜಿಲ್ಲೆಯ ಬಿಕ್ರು ಗ್ರಾಮದಲ್ಲಿ ಪೊಲೀಸರ ಮೇಲಿನ ದಾಳಿಗೆದುಬೆಗೆ ಸಹಾಯ ಮಾಡಿದ ಆರೋಪದ ಮೇಲೆ ಅವರಿಬ್ಬರನ್ನು ಬಂಧಿಸಲಾಗಿದೆ.

‘ದುಬೆ ಜುಲೈ 1ರಂದು ಬಾಜಪೇಯಿಗೆ ಕರೆ ಮಾಡಿದ್ದ. ಮರುದಿನ ಬಾಜಪೇಯಿ ತನ್ನ ಸಹಚರ ಪ್ರಶಾಂತ್‌ ಶುಕ್ಲಾ ಜೊತೆಗೆ ದುಬೆಯನ್ನು ಭೇಟಿಯಾಗಿ ₹ 2 ಲಕ್ಷ ನಗದು ಮತ್ತು .32 ಬೋರ್‌ ರಿವಾಲ್ವರ್‌ಗಳನ್ನು ನೀಡಿದ್ದ’ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ತನ್ನನ್ನು ಬಂಧಿಸಲು ಹಳ್ಳಿಗೆ ಬರುವಪೊಲೀಸರ ಮೇಲೆ ದಾಳಿ ನಡೆಸುವ ಕುರಿತು ದುಬೆ, ವಾಜಪೇಯಿ ಬಳಿ ವಿವರಿಸಿದ್ದ. ಜೊತೆಗೆ ತನಗೂ ಮತ್ತು ತಂಡದ ಸದಸ್ಯರಿಗೆ ಮೂರು ಎಸ್‌ಯುವಿ ವಾಹನಗಳ ವ್ಯವಸ್ಥೆ ಮಾಡುವಂತೆ ಕೇಳಿಕೊಂಡಿದ್ದ.ಅದರಂತೆ, ಬಾಜಪೇಯಿ ಎಸ್‌ಯುವಿ ತೆಗೆದುಕೊಂಡು ಸ್ಥಳಕ್ಕೆ ಹೋಗಿದ್ದ, ಆದರೆ, ಪೊಲೀಸ್‌ ಬಂದೋಬಸ್ತ್‌ ಇದ್ದುದರಿಂದ ಅವರಿಬ್ಬರ ಯೋಜನೆ ಫಲ ನೀಡಿರಲಿಲ್ಲ.

ಜುಲೈ 4 ರಂದು ಬಾಜಪೇಯಿ ತನ್ನ ವಾಹನವನ್ನು ಕಾಕದೇವ್ ಪ್ರದೇಶದಲ್ಲಿ ಬಿಟ್ಟು ಭೂಗತವಾಗಿದ್ದ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಾಹನಗಳನ್ನು ವಶಪಡಿಸಿಕೊಂಡ ತಕ್ಷಣ, ಪೊಲೀಸರು ಬಾಜಪೇಯಿ ಸಂಭಾವ್ಯ ಅಡಗುತಾಣಗಳ ಮೇಲೆ ದಾಳಿ ನಡೆಸಿ, ಕೆಲವೇ ಗಂಟೆಗಳಲ್ಲಿ ಆತನನ್ನು ಬಂಧಿಸಿದ್ದಾರೆ.

ಬಾಜಪೇಯಿಯನ್ನು ಉತ್ತರ ಪ್ರದೇಶ ಪೊಲೀಸರ ವಿಶೇಷ ಕಾರ್ಯಪಡೆ(ಎಸ್‌ಟಿಎಫ್‌)ಗೆ ಹಸ್ತಾಂತರಿಸಲಾಗಿದ್ದು, ಲಖನೌದಲ್ಲಿನ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದೆ. 15 ದಿನ ಎಸ್‌ಟಿಎಫ್‌ ವಶದಲ್ಲಿ ಆತ ಇರಲಿದ್ದಾನೆ.

ಬಾಜಪೇಯಿಯನ್ನು ಭಾನುವಾರ ನಜೀರಾಬಾದ್‌ ಪೊಲೀಸರಿಗೆ ಹಸ್ತಾಂತರಿಸಿದ ಕೆಲವೇ ಗಂಟೆಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ಆತನ ಬಿಡುಗಡೆಯ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದಂತೆ ಮತ್ತೆ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತೀವ್ರ ರಕ್ತಸ್ರಾವದಿಂದ ದುಬೆ ಸಾವು:

ರೌಡಿ ಶೀಟರ್‌ ವಿಕಾಸ್‌ ದುಬೆ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಅತಿಯಾದ ರಕ್ತಸ್ರಾವದಿಂದ ಸಾವನ್ನಪ್ಪಿರುವುದು ದೃಢಪಟ್ಟಿದೆ.

ಮರಣೋತ್ತರ ವರದಿಯ ಪ್ರಕಾರ, ದುಬೆ ದೇಹದ ಮೂಲಕ ಮೂರು ಗುಂಡುಗಳು ಹಾದುಹೋಗಿವೆ. ಈ ಗುಂಡುಗಳು ದೇಹ ಹೊಕ್ಕು ಹೊರಹೋದ ಸಂದರ್ಭದಲ್ಲಿ ಉಂಟಾದ ಆರು ಗಾಯಗಳು ಸೇರಿದಂತೆ ಆತನ ಮೃತದೇಹದಲ್ಲಿ ಒಟ್ಟು ಹತ್ತು ಗಾಯಗಳಿದ್ದವು.

ಎ.ಕೆ ಅವಸ್ಥಿ, ಎಸ್.ಕೆ.ಮಿಶ್ರಾ ಮತ್ತು ವಿ.ಚತುರ್ವೇದಿ ಅವರನ್ನೊಳಗೊಂಡ ಮೂವರು ಹಿರಿಯ ವೈದ್ಯರ ಸಮಿತಿ ಮರಣೋತ್ತರ ಪರೀಕ್ಷೆ ನಡೆಸಿತು. ಈ ಸಂಪೂರ್ಣ ಪ್ರಕ್ರಿಯೆಯನ್ನು ಅರವಿಂದ ತ್ರಿವೇದಿ ಚಿತ್ರೀಕರಿಸಿಕೊಂಡಿದ್ದಾರೆ.

ಮೊದಲ ಗುಂಡು ಬಲ ಭುಜದ ಮೂಲಕ ಹಾದುಹೋಗಿದ್ದರೆ, ಉಳಿದ ಎರಡು ಗುಂಡು ಅವನ ಎದೆಯ ಎಡಭಾಗದ ಮೂಲಕ ಹಾದು ಹೋಗಿವೆ.ಹೊಟ್ಟೆಯ ಭಾಗದಲ್ಲಿ ಆತನಿಗೆ ತೀವ್ರ ಗಾಯವಾಗಿದ್ದು, ಊದಿಕೊಂಡಿತ್ತು ಎಂದು ತಿಳಿಸಲಾಗಿದೆ.

ಎಂಟು ಪೊಲೀಸರ ಹತ್ಯೆಯ ಆರೋಪಿಯಾಗಿದ್ದ ಗ್ಯಾಂಗ್‌ಸ್ಟರ್‌ ವಿಕಾಸ್‌ ದುಬೆ ಜುಲೈ 10 ರಂದು ನಡೆದ ಪೊಲೀಸ್‌ ಎನ್‌ಕೌಂಟರ್‌ನಲ್ಲಿ ಸಾವನ್ನಪ್ಪಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.