ಕಾನ್ಪುರ: ಇಲ್ಲಿನ ಮೂಲಗಂಜ್ ಪ್ರದೇಶದ ಮಿಶ್ರಿ ಬಜಾರ್ ವ್ಯಾಪ್ತಿಯ ಮಸೀದಿ ಬಳಿ ನಿಲ್ಲಿಸಲಾಗಿದ್ದ ಎರಡು ಸ್ಕೂಟರ್‌ಗಳು ಸೆಕೆಂಡುಗಳ ಅಂತರದಲ್ಲಿ ಬುಧವಾರ ಸ್ಫೋಟಗೊಂಡಿದ್ದು, ಎಂಟು ಜನರು ಗಾಯಗೊಂಡಿದ್ದಾರೆ. ಸ್ಫೋಟದಿಂದ ಸಮೀಪದ ಅಂಗಡಿಗಳಿಗೆ ಹಾನಿಯಾಗಿದೆ.
ಮರ್ಕಜ್ ಮಸೀದಿ ಸಮೀಪ ಸಂಜೆ 7.30ರ ಸುಮಾರಿಗೆ ಸ್ಫೋಟಗಳು ಸಂಭವಿಸಿವೆ. ಸ್ಫೋಟಗಳ ಶಬ್ದವು ಸ್ಥಳದಿಂದ 500 ಮೀಟರ್‌ಗಳವರೆಗೆ ಕೇಳಿಸಿತ್ತು ಎಂದು ಸ್ಥಳೀಯರು ಹೇಳಿದ್ದಾರೆ.
ಘಟನೆಯಲ್ಲಿ ಎಂಟು ಜನರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಕಾನ್ಪುರ ಪೊಲೀಸ್ ಆಯುಕ್ತ ರಘುಬೀರ್ ಲಾಲ್ ತಿಳಿಸಿದ್ದಾರೆ. ಘಟನೆ ಕುರಿತು ಎಲ್ಲ ಕೋನಗಳಿಂದಲೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ದೀಪಾವಳಿ ಸಮೀಪಿಸುತ್ತಿರುವ ಕಾರಣ, ಪಟಾಕಿ ಸಂಬಂಧಿತ ಸ್ಫೋಟವೇ ಅಥವಾ ಭಯೋತ್ಪಾದಕ ಕೃತ್ಯವೇ ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಅವರು ವಿವರಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ, ವಿಧಿ ವಿಜ್ಞಾನ ತಜ್ಞರು ಮತ್ತು ವಿಧ್ವಂಸಕ ಕೃತ್ಯ ತಡೆ ತಂಡಗಳು ಸ್ಥಳ ತಪಾಸಣೆ ನಡೆಸಿ, ಮಾದರಿಗಳನ್ನು ಸಂಗ್ರಹಿಸಿವೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಶಂಕಿತರನ್ನು ಗುರುತಿಸಲು ಸುತ್ತಮುತ್ತಲಿನ ಪ್ರದೇಶದ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯಾವಳಿಗಳನ್ನು ವಿಶ್ಲೇಷಿಸಲಾಗುವುದು ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.