ನವದೆಹಲಿ: ಅಲಹಾಬಾದ್ ಹೈಕೋರ್ಟ್‌ನ ನ್ಯಾಯಮೂರ್ತಿ ಶೇಖರ್ ಕುಮಾರ್ ಯಾದವ್ ವಿರುದ್ಧ ಮಹಾಭಿಯೋಗ ನಿರ್ಣಯ ಮಂಡಿಸಿದ ನೋಟಿಸ್ ಮೇಲೆ ಸಭಾಪತಿ ಜಗದೀಪ್ ಧನಕರ್ ಅವರು ಏಕೆ ಕ್ರಮಕೈಗೊಂಡಿಲ್ಲ ಎಂದು ರಾಜ್ಯಸಭಾ ಸದಸ್ಯ ಕಪಿಲ್ ಸಿಬಲ್ ಮಂಗಳವಾರ ಪ್ರಶ್ನಿಸಿದ್ದಾರೆ.
ಸರ್ಕಾರವೇ ನ್ಯಾಯಮೂರ್ತಿಯ ರಕ್ಷಣೆಗೆ ಮುಂದಾಗಿದೆ. ತಾರತಮ್ಯ ನೀತಿ ಅನುಸರಿಸುತ್ತಿದೆ ಎಂದು ದೂರಿದ್ದಾರೆ.
ಯಾದವ್ ವಿರುದ್ಧ ಮೇಲ್ಮನೆಯಲ್ಲಿ ಅರ್ಜಿಯೊಂದು ಬಾಕಿ ಇರುವುದರಿಂದ, ಅವರ ವಿರುದ್ಧದ ಆಂತರಿಕ ತನಿಖೆಯನ್ನು ಮುಂದುವರಿಸದಂತೆ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಅವರಿಗೆ ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿಯು ಪತ್ರ ಬರೆದಿದ್ದಾರೆ ಎಂದು ಹೇಳಿದ್ದಾರೆ.
ಆದರೆ, ನ್ಯಾಯಮೂರ್ತಿ ಯಶವಂತ್ ವರ್ಮಾ ಪ್ರಕರಣದಲ್ಲಿ ಈ ರೀತಿ ನಡೆದುಕೊಂಡಿಲ್ಲ. ಇದು ಅತ್ಯಂತ ದುರದೃಷ್ಟಕರ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯು ತನ್ನ ಕರ್ತವ್ಯ ಪೂರೈಸದಿದ್ದಾಗ ಪ್ರಶ್ನಿಸಬೇಕಾಗುತ್ತದೆ ಎಂದು ಸಿಬಲ್ ತಿಳಿಸಿದ್ದಾರೆ.
ವಿಎಚ್‌ಪಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನ್ಯಾಯಮೂರ್ತಿ ಯಾದವ್ ದ್ವೇಷದ ಹೇಳಿಕೆಯೊಂದನ್ನು ನೀಡಿದ್ದರು. ಅವರ ವಿರುದ್ಧ ಗಂಭೀರ ಆಪಾದನೆ ಹೊರಿಸಿ, ಕ್ರಮ ಕೈಗೊಳ್ಳುವಂತೆ 55 ಸಂಸದರು ಸಹಿ ಹಾಕಿದ ಮನವಿಯನ್ನು ಸಭಾಪತಿ ಧನಕರ್ ಅವರಿಗೆ 2024ರ ಡಿ.13ರಂದು ಸಲ್ಲಿಸಿದ್ದೆವು. ಆರು ತಿಂಗಳಾದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಕಪಿಲ್ ಪತ್ರಿಕಾಗೋಷ್ಠಿಯಲ್ಲಿ ದೂರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.