ADVERTISEMENT

ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಕೇರಳದಲ್ಲಿ ಪ್ರಕರಣ

ಪಿಟಿಐ
Published 24 ಜನವರಿ 2020, 21:26 IST
Last Updated 24 ಜನವರಿ 2020, 21:26 IST
ಶೋಭಾ ಕರಂದ್ಲಾಜೆ 
ಶೋಭಾ ಕರಂದ್ಲಾಜೆ    

ಮಲಪ್ಪುರಂ(ಕೇರಳ): ಗುಂಪುಗಳ ನಡುವೆಕೋಮು ಭಾವನೆ ಪ್ರಚೋದಿಸಿದ ಆರೋಪದಡಿ ಸಂಸದೆ ಶೋಭಾ ಕರಂದ್ಲಾಜೆ ಅವರ ವಿರುದ್ಧ ಕೇರಳ ಪೊಲೀಸರು ಇಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.

‘ಕೇರಳ ಮತ್ತೊಂದು ಕಾಶ್ಮೀರವಾಗುತ್ತಿದೆ.ಮಲಪ್ಪುರಂ ಜಿಲ್ಲೆಯ ಪಂಚಾಯಿತಿ ಒಂದರಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆಗೆ ಬೆಂಬಲ ನೀಡಿದ ಹಿಂದೂಗಳಿಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿದೆ’ ಎಂದು ಆರೋಪಿಸಿ ಶೋಭಾ ಟ್ವೀಟ್‌ ಮಾಡಿದ್ದರು. ಇದರ ವಿರುದ್ಧ
ವಕೀಲ ಕೆ.ಆರ್‌.ಸುಭಾಷ್‌ ಚಂದ್ರನ್‌ಅವರು ದೂರು ದಾಖಲಿಸಿದ್ದರು.

ಶೋಭಾ ಆರೋಪವನ್ನು ಕುಟ್ಟಿಪುರಂ ಪಂಚಾಯಿತಿ ನಿರಾಕರಿಸಿದೆ.‘ಕುಟ್ಟಿಪುರಂ ಪಂಚಾಯಿತಿಯಲ್ಲಿ ದಲಿತ ಕುಟುಂಬಗಳ ಮೇಲಾಗುತ್ತಿರುವ ತಾರತಮ್ಯದ ಬಗ್ಗೆ ಕ್ರಮ ಕೈಗೊಳ್ಳುವುದನ್ನು ಬಿಟ್ಟು, ಸತ್ಯ ಹೇಳಿದ್ದಕ್ಕಾಗಿ ನನ್ನ ವಿರುದ್ಧ ಸಿಪಿಎಂ ಸರ್ಕಾರ ದೂರು ದಾಖಲಿಸಿದೆ’ ಎಂದು ಶೋಭಾ ಹೇಳಿದರು.

ADVERTISEMENT

ಬಾಂಗ್ಲಾಕ್ಕೆ ಅಕ್ರಮ ವಲಸಿಗರು
ಕೋಲ್ಕತ್ತ (ಪಿಟಿಐ): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿ ಬಳಿಕ ತಮ್ಮ ದೇಶಕ್ಕೆ ಹಿಂದಿರುಗುತ್ತಿರುವಬಾಂಗ್ಲಾದೇಶದ ಅಕ್ರಮ ವಲಸಿಗರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ ಎಂದು ಗಡಿ ಭದ್ರತಾ ಪಡೆ (ಬಿಎಸ್‌ಎಫ್‌) ಅಧಿಕಾರಿಗಳು ತಿಳಿಸಿದ್ದಾರೆ.

‘ಗಡಿ ದಾಟುತ್ತಿರುವ ಅಕ್ರಮ ವಲಸಿಗರ ಸಂಖ್ಯೆ ತಿಂಗಳಿಂದ ಹೆಚ್ಚಾಗಿದೆ. ಜನವರಿಯಲ್ಲಿಯೇ ಇಲ್ಲಿಯವರೆಗೆ ಬಾಂಗ್ಲಾದೇಶದ 268 ಅಕ್ರಮ ವಲಸಿಗರನ್ನು ಬಂಧಿಸಿರುವುದಾಗಿ’ ಬಿಎಸ್‌ಎಫ್‌ನ ಐ.ಜಿ (ದಕ್ಷಿಣ ಬಂಗಾಳ ಫ್ರಂಟಿಯರ್‌) ವೈ.ಬಿ.ಖುರಾನಿಯಾ ಮಾಹಿತಿ ನೀಡಿದ್ದಾರೆ.

ಎನ್‌ಎಸ್‌ಎ: ಅರ್ಜಿ ವಜಾ
ನವದೆಹಲಿ (ಪಿಟಿಐ): ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ ಹತ್ತಿಕ್ಕಲುರಾಷ್ಟ್ರೀಯ ಭದ್ರತಾ ಕಾಯ್ದೆಯ (ಎನ್‌ಎಸ್‌ಎ) ದುರ್ಬಳಕೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ವಜಾಗೊಳಿಸಿದೆ.

‘ಎನ್‌ಎಸ್‌ಎ ಹೇರಿಕೆ ಕುರಿತು ಸಾರಾಸಗಟಾಗಿ ಆದೇಶ ನೀಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ಅರುಣ್‌ ಮಿಶ್ರಾ ಹಾಗೂ ಇಂದಿರಾ ಬ್ಯಾನರ್ಜಿ ಅವರಿದ್ದ ಪೀಠವು ಅರ್ಜಿಯನ್ನು ಹಿಂಪಡೆಯುವಂತೆ ವಕೀಲರಾದ ಎಂ.ಎಲ್‌.ಶರ್ಮಾ ಅವರಿಗೆ ಸೂಚಿಸಿತು.

*
ಇಸ್ಲಾಮೊಫೋಬಿಯಾವನ್ನು ಸಹಜ ಸ್ಥಿತಿಗೆ ತರುವ ಪ್ರಯತ್ನಗಳು ನಡೆಯುತ್ತಿವೆ. ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ಎನ್‌ಆರ್‌ಸಿ ವಿರುದ್ಧ ಸಾವಿರಾರು ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಟ ನಡೆಸುತ್ತಿರುವುದು ಸಂತಸದ ಸಂಗತಿ.
-ಅರುಂಧತಿ ರಾಯ್‌, ಲೇಖಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.